ಹಾಸನ: ಬರಗಾಲದ ಹಿನ್ನಲೆ ಬೇಸಿಗೆ ರಜೆಯಲ್ಲಿ ಶಾಲಾ ಮಕ್ಕಳಿಗೆ ಪೌಷ್ಟಿಕಾಂಶ ಆಹಾರ ಕೊರತೆ ಕಾಡಬಾರದು ಎಂಬ ಕಾರಣಕ್ಕೆ ಸರ್ಕಾರ ಮಧ್ಯಾಹ್ನ ಬಿಸಿಯೂಟ ನೀಡುತ್ತಿದ್ದು, ಜಿಲ್ಲೆಯಲ್ಲಿ ಶೇ. ೬೧ ರಷ್ಟು ಮಕ್ಕಳು ಹಾಜರಾಗುತ್ತಿದ್ದಾರೆ.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಸರ್ಕಾರ ಬರಪೀಡಿತ ಪಟ್ಟಿಗೆ ಸೇರಿಸಿದೆ. ಗ್ರಾಮೀಣ ಭಾಗದ ಮಕ್ಕಳು ಆಹಾರ ಸಮಸ್ಯೆ ಎದುರಿಸಬಾರದು ಎಂಬ ಕಾರಣಕ್ಕೆ ಎಲ್ಲಾ ಸರ್ಕಾರಿ ಹಾಗು ಅನುದಾನಿತ ಶಾಲೆಗಳಲ್ಲಿ ಪ್ರಧಾನ ಮಂತ್ರಿ ಪೋಷಣ್-ಶಕ್ತಿ ಯೋಜನೆಯಡಿ ಏ. ೧೧ ರಿಂದ ಮೇ ೨೮ರ ವರೆಗೆ ೪೧ ದಿನಗಳ ಕಾಲ ಬಿಸಿಯೂಟ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ೫೨,೪೨೪ ಮಕ್ಕಳು ಒಪ್ಪಿಗೆ ಸೂಚಿಸಿದ್ದು ೩೨,೩೬೪ ಮಕ್ಕಳು ಹಾಜರಾಗುವ ಮೂಲಕ ಶೇ. ೬೧.೩೧ ಮಕ್ಕಳು ಹಾಜರಾಗುತ್ತಿದ್ದಾರೆ. ಇನ್ನು ಶೇ. ೩೯ರಷ್ಟು ಮಕ್ಕಳು ಬಿಸಿಯೂಟಕ್ಕೆ ಗೈರಾಗುತ್ತಿದ್ದು, ಒಪ್ಪಿಗೆ ಸೂಚಿಸಿದ ಮಕ್ಕಳನ್ನು ಕರೆತರುವ ಕೆಲಸವನ್ನು ಮುಖ್ಯಶಿಕ್ಷಕರು ಮಾಡುತ್ತಿದ್ದಾರೆ. ಅರಸೀಕೆರೆ ತಾಲ್ಲೂಕಿನಲ್ಲಿ ೪ ಹಾಗು ಹೊಳೆನರಸೀಪುರ ತಾಲ್ಲೂಕಿನಲ್ಲಿ ೧ ಕೇಂದ್ರಕ್ಕೆ ೨೫೦ಕ್ಕೂ ಅಧಿಕ ಮಕ್ಕಳು ಹಾಜರಾಗುವ ಮೂಲಕ ಹಸಿವು ನೀಗಿಸಿಕೊಳ್ಳುತ್ತಿದ್ದಾರೆ.
ಜಿಲ್ಲಾದ್ಯಂತ ೧೬೬೩ ಶಾಲೆಗಳಲ್ಲಿ ಅಡುಗೆ ಕೇಂದ್ರ ತೆರೆಯಲಾಗಿದ್ದು, ೨೨೭೪ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ೧೬೬೩ ಮುಖ್ಯಶಿಕ್ಷಕರು ಬಿಸಿಯೂಟದ ಜವಾಬ್ದಾರಿ ನಿಬಾಯಿಸುತ್ತಿದ್ದಾರೆ. ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆ ಶಿಕ್ಷಣಾಧಿಕಾರಿಗಳು ನಿತ್ಯ ಶಾಲೆಗಳಿಗೆ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸುತ್ತಿದ್ದಾರೆ.
0 Comments