ಮಳೆಗೆ ಜಿಲ್ಲೆಯ 93 ಮನೆಗಳಿಗೆ ಹಾನಿ ಸಾಕಾಗದ ಸರ್ಕಾರದ ಪರಿಹಾರ


ಹಾಸನ : ಜಿಲ್ಲೆಯಲ್ಲಿ ಏಪ್ರಿಲ್‌ 1 ರಿಂದ ಜೂನ್‌ 30ರ ವರೆಗೆ ಮಳೆಗೆ 93 ಮನೆಗಳು ಹಾನಿಗೀಡಾಗಿದ್ದು, ಅದರಲ್ಲಿ 3 ಮನೆಗಳು ಸಂಪೂರ್ಣ ಹಾನಿಯಾಗಿದೆ.
ಜಿಲ್ಲಾದ್ಯಂತ 1436 ವಿದ್ಯುತ್‌ ಕಂಬ ಧರೆಗುರುಳಿದ್ದರೆ 8 ವಿದ್ಯುತ್‌ ಪರಿವರ್ತಕಗಳು ಹಾಳಾಗಿವೆ. ಜಿಲ್ಲಾ ವಿಪತ್ತು ನಿರ್ವಹಣಾ ವಿಭಾಗದ ಅಧಿಕಾರಿಗಳು ತಾಲ್ಲೂಕುವಾರು ಮಾಹಿತಿ ಆಧರಿಸಿ ಪರಿಹಾರ ಹಣ ಒದಗಿಸುತ್ತಿದ್ದಾರೆ. 
ಹಾಸನ ತಾಲ್ಲೂಕಿನಲ್ಲಿ 2, ಸಕಲೇಶಪುರದಲ್ಲಿ 1 ಸೇರಿ ಒಟ್ಟು 3 ಮನೆಗಳು ಸಂಪೂರ್ಣ ಹಾನಿಗೀಡಾಗಿವೆ. ಆಲೂರು ತಾಲ್ಲೂಕಿನಲ್ಲಿ 4, ಅರಕಲಗೂಡು 14, ಅರಸೀಕೆರೆ 8, ಬೇಲೂರು 15, ಚನ್ನರಾಯಪಟ್ಟಣ 8, ಹಾಸನ 9, ಹೊಳೆನರಸೀಪುರ 28, ಸಕಲೇಶಪುರ ತಾಲ್ಲೂಕಿನಲ್ಲಿ 4 ಮನೆಗಳು ಸೇರಿ 90 ಮನೆಗಳು ಭಾಗಶ: ಹಾನೀಗಿಡಾಗಿವೆ. ಹೆಚ್ಚಿನ ಮನೆಗಳು ಕಳೆದ ವಾರದ ಹಿಂದೆ ಸುರಿದ ಜೋರು ಮಳೆ ಗಾಳಿಗೆ ಹಾನಿಗೀಡಾಗಿವೆ.
ಪರಿಹಾರ ಹೇಗೆ:
ಎಸ್‌‍ಡಿಆರ್‌ಎಫ್‌ ನಿಯಮದ ಅನುಸಾರ ಪೂರ್ಣ ಮನೆ ಹಾಳಾಗಿದ್ದರೆ 1.20 ಲಕ್ಷ ರೂ. ಹಾಗು ಭಾಗಶ: ಹಾನಿಯಾಗಿದ್ದರೆ ಅಂತಹ ಮನೆಗಳಿಗೆ 6.50 ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ. ಮಳೆಗೆ ಮನೆ ಬಿದ್ದ ವಿಚಾರ ತಿಳಿಯುತ್ತಿದ್ದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಪಂಚಾಯಿತಿ ಇಂಜಿನೀಯರ್‌, ರಾಜಸ್ವ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಾರೆ. ನಂತರ ಆ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುತ್ತದೆ. ಅವಶ್ಯವೆನಿಸಿದರೆ ತಹಶೀಲ್ದಾರ್‌ ಅವರೂ ಭೇಟಿ ನೀಡುತ್ತಾರೆ. ನಂತರ ಆರ್‌ಟಿಜಿಎಸ್‌‍ ಮೂಲಕ ಮನೆ ಮಾಲೀಕರ ಬ್ಯಾಂಕ್‌ ಖಾತೆಗೆ ಹಣ ಜಮೆಯಾಗುತ್ತದೆ. ಜಿಲ್ಲೆಯ 93 ಮನೆಗಳಿಗೆ ಈಗಾಗಲೇ ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 
ವಿದ್ಯುತ್‌ ಹಾನಿ: ಆಲೂರು ತಾಲ್ಲೂಕಿನಲ್ಲಿ 59 ವಿದ್ಯುತ್‌ ಕಂಬ ಹಾಗು 1 ಟಿಸಿ, ಅರಕಲಗೂಡಿನಲ್ಲಿ 121 ವಿದ್ಯುತ್‌ ಕಂಬ, ಅರಸೀಕೆರೆಯಲ್ಲಿ 175, ಬೇಲೂರು ತಾಲ್ಲೂಕಿನಲ್ಲಿ 275 ವಿದ್ಯುತ್‌ ಕಂಬ ಹಾಗು 6 ಟಿಸಿಗಳು ಹಾಳಾಗಿವೆ. ಚನ್ನರಾಯಪಟ್ಟಣದಲ್ಲಿ 338 ವಿದ್ಯುತ್‌ ಕಂಬ, ಹಾಸನದಲ್ಲಿ 210, ಹೊಳೆನರಸೀಪುರ ತಾಲ್ಲೂಕಿನಲ್ಲಿ 146 ಹಾಗು ಸಕಲೇಶಪುರದಲ್ಲಿ 159 ಕಂಬ ಹಾಳಾಗಿದ್ದರೆ 1 ಟಿಸಿ ಸಹ ಮಳೆಯಿಂದ ಕೆಟ್ಟುನಿಂತಿದೆ. 
ಗ್ರಾಮ ಸಮುದಾಯವೇ ಆಸರೆ:
ತಾಲ್ಲೂಕಿನ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ರಹದೇವರಹಳ್ಳಿಯ ನಿವಾಸಿ ನಾಗಮ ಅವರ ಮನೆ ಮೇ 25 ರಂದು ಕುಸಿದಿದ್ದು ಕಳೆದ ಒಂದೂವರೆ ತಿಂಗಳಿನಿಂದ ಊರಿನ ಸಮುದಾಯ ಭವನವೇ ಆಸರೆಯಾಗಿದೆ.
ಭವನದ ಕೋಣೆಯಲ್ಲಿ ಅವರು ತಮ ಎಲ್ಲಾ ವಸ್ತುಗಳನ್ನು ಜೋಡಿಸಿಕೊಂಡಿದ್ದಾರೆ. ಅಲ್ಲಿಯೇ ಅಡುಗೆ, ಊಟ ಮಾಡುತ್ತಾರೆ. ಆದರೆ ಶೌಚಾಲಯ ಹಾಗು ಸ್ನಾನದ ಕೊಠಡಿ ಇಲ್ಲದೆ ಅಕ್ಕಪಕ್ಕದ ಮನೆಗೆ ಹೋಗಬೇಕಾದ ಪರಿಸ್ಥಿತಿ ಇದೆ. ಇದೆಲ್ಲದರ ಜೊತೆಗೆ ಇದುವರೆಗೆ ಇವರಿಗೆ ಸರ್ಕಾರದ ಪರಿಹಾರ ದೊರೆತಿಲ್ಲ. ನಾಗಮ ಅವರ ಪತಿ ಕೆಲ ವರ್ಷಗಳ ಹಿಂದಷ್ಟೇ ನಿಧನರಾಗಿದ್ದು ನಾಗಮ ಅವರ ಹೆಸರಿಗೆ ಯಾವ ಬ್ಯಾಂಕ್‌ ಖಾತೆಗಳಿಲ್ಲ. ಹೀಗಾಗಿ ಹಣ ಪಾವತಿಸಲು ಸಾಧ್ಯವಾಗಿಲ್ಲ. ಗುರುವಾರ ದಾಖಲೆಗಳನ್ನು ಕೊಟ್ಟಿದ್ದು ಪರಿಹಾರದ ಹಣ ಜಮೆ ಮಾಡಲಾಗುವುದು ಎಂದು ತಹಶೀಲ್ದಾರ್‌ ಕಚೇರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.
ಸಾಕಾಗದ ಪರಿಹಾರ ಮೊತ್ತ:
ಮಳೆಯಿಂದ ಹಾನಿಗೀಡಾದ ಮನೆಗೆ ಜಿಲ್ಲಾಡಳಿತ ನೀಡುತ್ತಿರುವ ಪರಿಹಾರ ಸಾಕಾಗುವುದಿಲ್ಲ. ಮನೆಯ ಒಂದು ಗೋಡೆ ಕುಸಿದರೆ ಕೇವಲ 6.50 ಸಾವಿರ ರೂ. ನೀಡಲಾಗುತ್ತಿದೆ. ಇಷ್ಟು ಕಡಿಮೆ ಮೊತ್ತದಿಂದ ರಿಪೇರಿ ಸಾಧ್ಯವಿಲ್ಲ. ಪರಿಹಾರ ಮೊತ್ತ ಹೆಚ್ಚಿಸಿ ಎಂದು ಕೇಳಿದರೆ ಕಾನೂನು ಪಾಠ ಮಾಡುತ್ತಾರೆ ಎಂದು ಆಲೂರು ತಾಲ್ಲೂಕಿನ ನಿವಾಸಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

Post a Comment

0 Comments