ಹಾಸನ : ಕಾಫಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರೊಬಸ್ಟಾ ಪಾರ್ಚ್ಮೆಂಟ್ ಕಾಫಿ ದರ 50 ಕೆಜಿಗೆ 18 ಸಾವಿರರೂ. ಗಡಿ ತಲುಪುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದೆ.
ಈ ಹಿಂದೆಯಲ್ಲ 9 ಸಾವಿರರೂ. ಆಸುಪಾಸಿನಲ್ಲಿದ್ದ ದರ ಏಕಾಏಕಿ ದುಪ್ಪಟ್ಟಾಗಿದ್ದು, 20 ಸಾವಿರರೂ. ತಲುಪಿದರೂ ಆಶ್ಚರ್ಯವಿಲ್ಲ ಎಂದು ಹೇಳಲಾಗುತ್ತಿದೆ. ಶನಿವಾರದ ಮಾರುಕಟ್ಟೆ ರೊಬಸ್ಟಾ ಪಾರ್ಚ್ಮೆಂಟ್ಗೆ 17,200ರೂ. ಖರೀದಿಸಲಾಗುತ್ತಿದೆ. ಅತ್ಯತ್ತಮ ಗುಣಮಟ್ಟದ ಕಾಫಿಗೆ 18 ಸಾವಿರರೂ. ಕೂಡ ಸಿಗುತ್ತಿದೆ. ಪ್ರಸ್ತುತ ರೊಬಸ್ಟಾ ಚೆರಿ ಕೂಡ 10,100ರೂ.ಗೆ ಮಾರಾಟವಾಗುತ್ತಿದೆ.
ಈ ಬಾರಿ ಕಾಫಿಗೆ ಉತ್ತಮ ಬೆಲೆ ಇದ್ದ ಹಿನ್ನಲೆ ಈಗಾಗಲೇ ಶೇ.90 ರಷ್ಟು ಬೆಳೆಗಾರರು ಕೊಯ್ಲು ಮಾಡಿದ ಕಾಫಿಯನ್ನು ಮಾರಾಟ ಮಾಡಿದ್ದಾರೆ. ಆದರೆ, ಈಗ ದಿಢೀರ್ ಬೆಲೆ ಏರಿಕೆಯಿಂದ ಬೆಳೆಗಾರರು ಹತಾಶರಾಗಿದ್ದರೆ. ಬೆಳೆಗಾರರಿಂದ ಕಾಫಿ ಬೆಳೆ ಖರೀದಿಸಿ ದಾಸ್ತಾನು ಇಟ್ಟುಕೊಂಡಿದ್ದ ಮಧ್ಯವರ್ತಿಗಳಿಗೆ ಇದೀಗ ದರ ಏರಿಕೆಯಿಂದ ಲಾಟರಿ ಹೊಡೆದಂತಾಗಿದೆ. ಕಳೆದ 1 ತಿಂಗಳ ಹಿಂದೆ ಒಂದೇ ದಿನ ದಿಢೀರ್ ಎಂಬಂತೆ ಕಾಫಿ ಮೂಟೆಯೊಂದಕ್ಕೆ ಒಂದೂವರೆ ಸಾವಿರರೂ. ಏರಿಕೆಯಾಗಿತ್ತು. ನಂತರ ಬೆಲೆ ಇಳಿಯಲಾರಂಭಿಸಿದ್ದರಿಂದ ಶೇಖರಿಸಿಟ್ಟಿದ ಕಾಫಿಯನ್ನು ಬೆಳೆಗಾರರು ಮಾರಾಟ ಮಾಡಿದ್ದರು. ಆದರೆ, ಇದೀಗ ಮತ್ತೆ ಕಾಫಿ ಬೆಲೆ ಒಂದೇ ಸಮನೆ ಏರಿಕೆ ಕಾಣಲಾರಂಭಿಸಿದೆ.
ಹವಾಮಾನ ವೈಪರೀತ್ಯದಿಂದಾಗಿ ಕಾಫಿ ಇಳುವರಿ ಕುಸಿತ ಕಂಡಿದ್ದು, ಮುಂದಿನ ದಿನಗಳಲ್ಲಿ ಕೊರತೆ ಆಗದಿರಲಿ ಎಂಬ ಕಾರಣಕ್ಕೆ ಉದ್ದಿಮೆದಾರರು ಕಾಫಿ ಸಂಗ್ರಹಣೆಯಲ್ಲಿ ತೊಡಗಿದ್ದಾರೆ. ಇದೇ ಕಾರಣಕ್ಕೆ ರೊಬಸ್ಟಾ ಕಾಫಿ ಬೆಲೆ ಗಗನಕ್ಕೇರಿದೆ. ಆದರೆ, ಕಾಫಿ ಬೆಳೆಗಾರರು ಫಸಲನ್ನು ಈಗಾಗಲೇ ಮಾರಾಟ ಮಾಡಿದ್ದು, ಕೈಗೆ ಬಂದ ತುತ್ತು ಬಾಯಿಗೆ ಸಿಗದ ಹಾಗೆ ಆಗಿದೆ. ಕಾಫಿ ಬೆಲೆ ಈ ಮಟ್ಟಿಗೆ ಹೆಚ್ಚಳವಾಗಲು ಕಾರಣ ಹುಡುಕುತ್ತ ಹೋದರೆ ಅತೀ ಹೆಚ್ಚು ಕಾಫಿ ಬೆಳೆಯುವ ದೇಶಗಳಲ್ಲಿ ಕಾಫಿ ಇಳುವರಿ ಗಣನೀಯವಾಗಿ ತಗ್ಗಿರುವುದೇ ಪ್ರಮುಖ ಕಾರಣ ಎನ್ನಲಾಗಿದೆ.
ಬೆಲೆ ಏರಿಕೆಗೆ ಕಾರಣ:
ಪ್ರಮುಖವಾಗಿ ಬ್ರೆಜಿಲ್, ವಿಯಟ್ನಾಂ, ಮೆಕ್ಸಿಕೋದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಬೆಳೆಯಲಾಗುತ್ತದೆ. ಆದರೆ, ಈ ಬಾರಿ ಹವಾಮಾನ ವೈಪರೀತ್ಯದಿಂದ ವಿಯಟ್ನಾಂ ಹಾಗು ಮೆಕ್ಸಿಕೋದಲ್ಲಿ ಇಳುವರಿ ಗಣನೀಯ ತಗ್ಗಿದೆ. ಹೀಗಾಗಿ ಭಾರತದಲ್ಲಿ ಬೆಳೆಯುವ ರೊಬಸ್ಟಾಗೆ ಹೆಚ್ಚಿನ ಧಾರಣೆ ಬಂದಿದೆ. ವಿಯಟ್ನಾಂ ಹಾಗು ಮೆಕ್ಸಿಕೋದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಇನ್ನೂ ಎರಡೂರು ವರ್ಷ ಕಾಫಿ ಇಳುವರಿ ಹೆಚ್ಚು ಬರುವುದಿಲ್ಲ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಉದ್ಯಮಿಗಳು ತಮ್ಮ ಉದ್ಯಮಕ್ಕೆ ಕಾಫಿ ಕೊರತೆ ಉಂಟಾಗದಿರಲೆಂಬ ಕಾರಣಕ್ಕೆ ಹೆಚ್ಚೆಚ್ಚು ಕಾಫಿ ಖರೀದಿಸಿ ಸಂಗ್ರಹಿಸುತ್ತಿದ್ದಾರೆ. ಈ ಕಾರಣದಿಂದಲೂ ರೊಬಸ್ಟಾ ಕಾಫಿ ಬೆಲೆ ಗಗನಕ್ಕೇರಿರುವ ಸಾಧ್ಯತೆ ಇದೆ.
ರಾಜ್ಯದ ಕಾಫಿ ಗುಣಮಟ್ಟ ಅತ್ಯುತ್ತಮ:
ಭಾರತದಲ್ಲಿ ಬೆಳೆಯುವ ಕಾಫಿಯನ್ನು ಪ್ರಮುಖವಾಗಿ ಯುರೋಪ್ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಬೆಳೆಯುವ ಕಾಫಿಯ ಗುಣಮಟ್ಟ ಅತ್ಯುತ್ತಮ. ಕಾಫಿಯ ಔಟನ್ ಸಹ ಅಧಿಕವಾಗಿ ಬರುತ್ತದೆ. 50 ಕೆಜಿ ಕಾಫಿ ಮೂಟೆಯನ್ನು ಬೇಳೆ ಮಾಡಿದಾಗ ಶೇ.25ರಿಂದ 30 ಬೇಳೆ ಬರುತ್ತದೆ. ಹೀಗಾಗಿಯೇ ಕರ್ನಾಟಕದಲ್ಲಿ ಬೆಳೆಯುವ ರೊಬಸ್ಟಾ ಕಾಫಿ ಬೆಲೆ ಹೆಚ್ಚಾಗಿದೆ. ಈ ಹಿಂದೆ ಕಾಫಿಯ ಬೇಳೆ ಎಷ್ಟು ಪ್ರಮಾಣ ಬರುತ್ತದೆ ಎಂದು ನೋಡುತ್ತಿರಲಿಲ್ಲ. ಈಗ ಬೇಳೆ ಪ್ರಮಾಣವನ್ನು ಲೆಕ್ಕ ಹಾಕುತ್ತಿರುವುದರಿಂದಾಗಿ ಕಾಫಿಗೆ ಹೆಚ್ಚು ಧಾರಣೆ ಸಿಗುತ್ತಿದೆ ಎನ್ನುತ್ತಾರೆ ಕಾಫಿ ಬೆಳೆಗಾರರು.
ವಿದೇಶಿ ಮಾರುಕಟ್ಟೆಯಲ್ಲಿ ದರ ನಿಗದಿ:
ಕರ್ನಾಟಕದಲ್ಲಿ ಬೆಳೆಯುವ ಕಾಫಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಾದ ನ್ಯೂಯಾರ್ಕ್ ಹಾಗು ಲಂಡನ್ನಲ್ಲಿ ದರ ನಿಗದಿಯಾಗುತ್ತದೆ. ಅಲ್ಲಿನ ಮಾರುಕಟ್ಟೆಯ ಪ್ರಕಾರ 50 ಕೆಜಿ ರೊಬಸ್ಟಾ ಪಾರ್ಚ್ಮೆಂಟ್ ಕಾಫಿ ದರ 220 ರಿಂದ 230 ಸೆಂಟ್ಸ್ಇದೆ. ಇದನ್ನು ಭಾರತೀಯ ರೂಪಾಯಿಯಲ್ಲಿ ಪರಿಗಣನೆಗೆ ತೆಗೆದುಕೊಂಡಾಗ ಕನಿಷ್ಠ 20 ಸಾವಿರರೂ. ಸಿಗಬೇಕು. ಆದರೆ, ಮಧ್ಯವರ್ತಿಗಳು ಹಾಗು ರಫ್ತುದಾರರು ಬೆಳೆಗಾರರಿಗೆ ಇಷ್ಟು ಬೆಲೆಯನ್ನು ನೀಡದೆ ಈ ಹಿಂದಿನಿಂದಲೂ ವಂಚಿಸುತ್ತಲೇ ಇದ್ದಾರೆ. ರಷ್ಯಾ-ಉಕ್ರೇನ್ ಯುದ್ಧ, ಸಮುದ್ರದಲ್ಲಿ ಹಡುಗುಗಳ್ಳರ ಕಾರಣ ನೀಡಿ ಕಡಿಮೆ ಬೆಲೆ ನೀಡುತ್ತಿದ್ದರು ಎಂದು ಬೆಳೆಗಾರರು ಆರೋಪಿಸಿದ್ದಾರೆ.
ಬೆಳೆಗಾರರ ಬಳಿ ಫಸಲೇ ಇಲ್ಲ:
ಫೆಬ್ರವರಿಯಲ್ಲಿ ಕಾಫಿ ಕೊಯ್ದು ಆರಂಭವಾಗಿ ಏಪ್ರಿಲ್ ವೇಳೆಗಾಗಲೇ ಮುಕ್ತಾಯಗೊಳ್ಳುತ್ತದೆ. ಬೆಳೆಗಾರರು ಕಾಫಿ ಬೆಳೆಯನ್ನೇ ನಂಬಿಕೊಂಡು ಇತರೆ ವ್ಯವಹಾರಗಳನ್ನು ಮಾಡಿರುತ್ತಾರೆ. ಹೀಗಾಗಿ ಕಾಫಿ ಕೊಯ್ದು ಕೈಗೆ ಬರುತ್ತಿದ್ದಂತೆ ಮಾರಾಟ ಮಾಡಿ ತಮ್ಮ ಹಣಕಾಸು ವ್ಯವಹಾರ ಪೂರ್ಣಗೊಳಿಸಿಕೊಳ್ಳುತ್ತಾರೆ. ಇದರಿಂದಾಗಿ ಏಪ್ರಿಲ್ ವೇಳೆಗಾಗಲೇ ಬಹುತೇಕ ಬೆಳೆಗಾರರ ಬಳಿ ಫಸಲೇ ಇಲ್ಲ. ಬೆಳೆಗಾರರು ಕಾಫಿ ಮಾರಾಟ ಮಾಡಿದ ಬಳಿಕ ಧಾರಣೆ ಏಕಾಏಕಿ ಏರಿದ್ದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಸಿಗದಂತಾಗಿದೆ. ಕೇವಲ ಶೇ.5 ರಷ್ಟು ಬೆಳೆಗಾರರ ಬಳಿ ಕಾಫಿ ಇದೆಯಾದರೂ ಅವರು ಇನ್ನೂ ಹೆಚ್ಚಿನ ಧಾರಣೆ ಬರುವ ನಿರೀಕ್ಷೆಯಲ್ಲಿ ಕಾಫಿ ಮಾರಾಟಕ್ಕೆ ಮುಂದಾಗುತ್ತಿಲ್ಲ. ವರ್ತಕರು ಈಗಾಗಲೇ ಸಣ್ಣ, ಮಧ್ಯಮ ಬೆಳೆಗಾರರ ಬಳಿ ಅಲ್ಪ ಬೆಲೆ ಖರೀದಿಸಿ ಸಂಗ್ರಹಿಸಿಟ್ಟುಕೊಂಡು ಇನ್ನೂ ಹೆಚ್ಚಿನ ಬೆಲೆ ನಿರೀಕ್ಷೆಯಲ್ಲಿದ್ದಾರೆ.
((ಶನಿವಾರದ ಕಾಫಿ ಧಾರಣೆ))
ರೊಬಸ್ಟಾ ಪಾರ್ಚ್ಮೆಂಟ್-17,200
ರೊಬಸ್ಟಾ ಚೆರಿ - 10,100
ಅರೆಬಿಕಾ ಪಾರ್ಚ್ಮೆಂಟ್- 15,800
ಅರೆಬಿಕಾ ಚೆರಿ-9,500
ಕಾಳುಮೆಣಸು -640
0 Comments