ಶುರುವಾಯ್ತು ರೆಸಾರ್ಟ್ ಲಾಬಿ ಪ್ರವಾಸಿ ತಾಣ ರಕ್ಷಣೆ ಮುಖ್ಯವೆಂದ ಇಲಾಖೆ


ಹಾಸನ : ಮಲೆನಾಡಿನ ಪ್ರವಾಸಿ ತಾಣಗಳ ವೀಕ್ಷಣೆಗೆ ಪ್ರವಾಸಿಗರಿಗೆ ಮುಕ್ತ ಅವಕಾಶ ಕಲ್ಪಿಸಬೇಕು. ಬೆಟ್ಟಗುಡ್ಡ ಏರಲು ವಾಹನಗಳಿಗೆ ಅವಕಾಶ ಮಾಡಿಕೊಡಬೇಕೆಂದು ರೆಸಾರ್ಟ್‌ ಮಾಲೀಕರು ಅರಣ್ಯ ಇಲಾಖೆ ಅಧಿಕಾರಿಗಳ ದುಂಬಾಲು ಬಿದ್ದಿದ್ದಾರೆಂಬುದು ತಿಳಿದುಬಂದಿದೆ.
ಮಳೆಗಾಲದಲ್ಲಿ ಪ್ರಕೃತಿ ಸೌಂದರ್ಯ ಸವಿಯಲು ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯದಿಂದಲೂ ಸಕಲೇಶಪುರಕ್ಕೆ ಪ್ರವಾಸಿಗರು ಬರುತ್ತಿದ್ದಾರೆ. ವಾರಾಂತ್ಯದಲ್ಲಿ ಬರುವ ಸಾರ್ವಜನಿಕರು ಹೋಂ ಸ್ಟೇ, ರೆಸಾರ್ಟ್‌ಗಳಲ್ಲಿ ವಾಸ್ತವ್ಯ ಹೂಡಿ ಹತ್ತಿರದ ತಾಣಗಳನ್ನು ನೋಡುವುದು ವಾಡಿಕೆ. ಆದರೆ ಈ ಬಾರಿ ಅರಣ್ಯ ಇಲಾಖೆ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ವಾಹನಗಳ ಪ್ರವೇಶ ನಿಷೇಧಿಸಿದೆ. ಮಣ್ಣು ಸವಕಳಿ ತಡೆಯುವುದು ಹಾಗು ಪ್ರವಾಸಿಗರ ಹಿತದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅದರಿಂದ ರೆಸಾರ್ಟ್‌ ಮಾಲೀಕರಿಗೆ ಭಾರೀ ಹೊಡೆತ ಬಿದ್ದಿದ್ದು, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.
ಸಕಲೇಶಪುರ ತಾಲ್ಲೂಕಿನ ಪಟ್ಲ ಬೆಟ್ಟ, ಯಡಕುಮರಿ, ಗವಿಬೆಟ್ಟ, ಬೆಟ್ಟದ ಬೈರವೇಶ್ವರ ಮುಂತಾದ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ. ಕಾಲ್ನಡಿಗೆಯಲ್ಲಿ ಬೆಟ್ಟ ಏರುವುದು ಕಷ್ಟಸಾಧ್ಯವಾದ ಹಿನ್ನಲೆ ವಾಹನಗಳಿಗೆ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ಅರಣ್ಯ ಇಲಾಖೆಯಿಂದ ಸರ್ವೆ:
ಹೊಸಹಳ್ಳಿ, ಪಟ್ಲ ಸೇರಿ ಎಲ್ಲಾ ಬೆಟ್ಟಗಳ ಸರ್ವೆಗೆ ಅರಣ್ಯ ಇಲಾಖೆ ಮುಂದಾಗಿದೆ. ಕಂದಾಯ ಹಾಗು ಪ್ರವಾಸೋದ್ಯಮ ಇಲಾಖೆ ನೆರವಿನಿಂದ ಜಂಟಿ ಕಾರ್ಯಾಚರಣೆ ಕೈಗೊಂಡಿದ್ದು ರೆಸಾರ್ಟ್‌ ವ್ಯಾಪ್ತಿಯ ಜಾಗದಲ್ಲಿ ಮಾತ್ರ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರವಾಸಿಗರಿಗೆ ಆನ್‌ಲೈನ್‌ ಬುಕ್ಕಿಂಗ್‌ ವ್ಯವಸ್ಥೆ ಕಲ್ಪಿಸಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಯೋಜನೆ ಹಾಕಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪಟ್ಲ ಬೆಟ್ಟದ ಸರ್ವೆ ಕಾರ್ಯ ಪೂರ್ಣಗೊಂಡಿದೆ.
ಪ್ರವಾಸಿಗರ ಹುಚ್ಚಾಟ:
ಮಳೆಗಾಲದಲ್ಲಿ ಬೆಟ್ಟ ಗುಡ್ಡಗಳ ವೀಕ್ಷಣೆಗೆ ಬರುತ್ತಿರುವ ಪ್ರವಾಸಿಗರ ಹುಚ್ಚಾಟ ಮಿತಿ ಮೀರಿದೆ. ಹರಗರಹಳ್ಳಿ ಚಿಕ್ಕ ಬೆಟ್ಟದ ಮೇಲೆ ಜೀಪಿನಲ್ಲಿ ತೆರಳಿದ್ದ ಯುವಕರ ಗುಂಪು ಬೇಕಾಬಿಟ್ಟಿ ವಾಹನ ಚಾಲನೆ ಮೂಲಕ ಹಾನಿಗೊಳಿಸಿದೆ. ಅದೇ ರೀತಿ ಯಸಳೂರು ಭಾಗದಲ್ಲೂ ಯುವಕರ ಹುಚ್ಚಾಟಗಳು ಬೆಳಕಿಗೆ ಬಂದಿವೆ. ಅರಣ್ಯ ಇಲಾಖೆ ಸಿಬ್ಬಂದಿ ಈ ಸಂಬಂಧ ಒಬ್ಬನ ವಿರುದ್ಧ ಎಫ್‌ಐಆರ್‌ ದಾಖಲಿಸಿ ಫಾರ್ಚುನರ್‌ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಸಕಲೇಶಪುರ ಮಾತ್ರವಲ್ಲದೆ ಜಿಲ್ಲೆಯ ಇತರ ಪ್ರವಾಸಿ ತಾಣಗಳು ಕೈ ಬೀಸಿ ಕರೆಯುತ್ತಿವೆ. ಹಾಸನ ತಾಲ್ಲೂಕಿನ ಶೆಟ್ಟಿಹಳ್ಳಿ ಚರ್ಚ್‌, ಹಾಲುವಾಗಿಲು ಕಟ್ಟೆ, ಗೊರೂರಿನ ಹೇಮಾವತಿ ಜಲಾಶಯ, ಸೀಗೆ ಗುಡ್ಡ ಹೀಗೆ ಅನೇಕ ಪ್ರವಾಸಿ ತಾಣಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು ಸುರಕ್ಷತೆಗೆ ಆದ್ಯತೆ ನೀಡಬೇಕಿದೆ. ಸೆಲ್ಫಿ, ಫೋಟೊ ಆಸೆಗಾಗಿ ಜೀವಕ್ಕೆ ತೊಂದರೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಪೊಲೀಸ್‌‍ ಇಲಾಖೆಯಿಂದಲೂ ಪ್ರೇಕ್ಷಣೀಯ ಸ್ಥಳಗಳಲ್ಲಿ ಭದ್ರತೆ ವ್ಯವಸ್ಥೆ ಕೈಗೊಳ್ಳಬೇಕಿದೆ.

Post a Comment

0 Comments