ಎನ್ ಡಿಆರ್ ಎಫ್ ನ ವಿಚಿತ್ರ ಕಾನೂನು ಮನೆ ಕಳೆದುಕೊಂಡವರಿಗೆ ಸಿಗದ ಪರಿಹಾರ

ಹಾಸನ : ಆರು ತಿಂಗಳೊಳಗೆ ಬಿಲ್‌ ಪಾವತಿಸದ ಹಿನ್ನಲೆ ಕಳೆದ ಮೂರು ವರ್ಷಗಳಿಂದ ಎನ್‌ಡಿಆರ್‌ಎಫ್‌ನಡಿ ಬಂದ ಪರಿಹಾರ ಹಣ ವಿತರಿಸಲು ಸಾಧ್ಯವಾಗಿಲ್ಲ. ಎನ್ ಡಿಆರ್ ಎಫ್ ನ ಈ ಕಾನೂನು ನೂರಾರು ಕುಟುಂಬಗಳಿಗೆ ಸಂಕಷ್ಟ ತಂದೊಡ್ಡಿದೆ.
ಹೌದು ಶನಿವಾರ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸುದೀರ್ಘ ಚರ್ಚೆಯಾಯಿತು.
ಮಳೆ ಹಾನಿ ಕುರಿತು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಮಾಹಿತಿ ನೀಡುತ್ತಿದ್ದಾಗ ಈ ವಿಚಾರದ ಕುರಿತು ಗಮನ ಸೆಳೆದರು. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಹಲವು ಬಾರಿ ಪತ್ರ ಬರೆದರೂ ಉತ್ತರ ಬಂದಿಲ್ಲ. ಕಾನೂನು ಅಡ್ಡಿಯಿಂದ ಭಾರೀ ಸಮಸ್ಯೆಯಾಗುತ್ತಿದೆ ಎಂದರು.
ಅತಿವೃಷ್ಟಿಯಿಂದ ಮನೆ ಬಿದ್ದಿದ್ದರೆ ಎನ್‌ಡಿಆರ್‌ಎಫ್‌ನಡಿ 5 ಲಕ್ಷ ರೂ. ಪರಿಹಾರ ನೀಡಬೇಕು. ಅದಕ್ಕೆ ಆರು ತಿಂಗಳೊಳಗೆ ಬಿಲ್‌ ಪಾವತಿಸಬೇಕು. ಅವಧಿ ಮುಗಿದ ಬಳಿಕ ಬಂದ ಯಾವ ಫಲಾನುಭವಿಗಳಿಗೂ ಹಣ ಪಾವತಿಯಾಗಿಲ್ಲ. ಕಾಮಗಾರಿ ವಹಿಸಿಕೊಂಡ ಗುತ್ತಿಗೆದಾರರು, ಸಂಬಂಧಪಟ್ಟ ಇಂಜಿನೀಯರ್‌ಗಳು ನಿಗದಿತ ಅವಧಿಯೊಳಗೆ ಕೆಲಸ ಮುಗಿಸದೆ ಇರುವುದರಿಂದ ಸಾಕಷ್ಟು ಜನ ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಖಾತೆಯಲ್ಲಿ ಅನುದಾನ ಇದೆಯಾದರೂ ಅದನ್ನು ವಿತರಿಸುವ ಹಕ್ಕು ಜಿಲ್ಲಾಧಿಕಾರಿಗಳಿಗೆ ಇಲ್ಲ. 2020-21ರಲ್ಲಿ 1.50 ಕೋಟಿ ರೂ., 2021-22ರಲ್ಲಿ 35 ಲಕ್ಷ ರೂ., 2022-23ನೇ ಸಾಲಿನ 3.25 ಕೋಟಿ ರೂಪಾಯಿ ಉಳಿದಿದೆ. ಆ ಹಣವನ್ನು ವಿತರಿಸುವ ಕಾಲಮಿತಿಯನ್ನು ವಿಸ್ತರಿಸಬೇಕೆಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌.ರಾಜಣ್ಣ ಅವರು ಮಾತನಾಡಿ, ಕೇಂದ್ರ ಸರ್ಕಾರದ ಈ ರೀತಿಯ ನಿಯಮಗಳಿಂದ ತೊಂದರೆಯಾಗುತ್ತದೆ. ನಾನೂ ಸಹ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆಂದು ಭರವಸೆ ನೀಡಿದರು.

Post a Comment

0 Comments