ಹಾಸನ: ದುಶ್ಚಟಗಳಿಂದ ದೂರವಿರಿ, ಆನ್‌ಲೈನ್ ಗೇಮ್‌ಗಳಿಗೆ ಮೋಸ ಹೋಗಿ ಹಣ ಕಳೆದುಕೊಳ್ಳಬೇಡಿ ಎಂದು ಯುವಕರಿಗೆ ಬುದ್ದಿ ಹೇಳುವ ಪ್ರಜ್ಞಾವಂತರೇ ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಹಾಸನ ನಗರಸಭೆ ಇಂತಹ ಅನಿಷ್ಟ ಮಾರ್ಗದಲ್ಲಿ ಸಾಗುತ್ತಿದ್ದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ನಗರಸಭೆಯಿಂದ ನಗರದ ಪ್ರವೇಶದ ಮುಖ್ಯ ದ್ವಾರಗಳಲ್ಲಿ ಆನ್‌ಲೈನ್ ಗೇಮ್ ಜುಪೀ ಜಾಹೀರಾತು ಫಲಕ ಅಳವಡಿಸಿದ್ದು ಚರ್ಚೆಗೆ ಗ್ರಾಸವಾಗಿದೆ. ೞಜುಪಿ..ಶತಮಾನಗಳಿಂದಲೂ ಭಾರತದ್ದೇ ಆದ ಆಟೞ ಎಂಬ ಬರಹದ ನಾಮಫಲಕದ ಹೋಲ್ಡಿಂಗ್‌ಗಳನ್ನು ಎಲ್ಲೆಡೆ ಕಾಣಬಹುದಾಗಿದೆ. ಅದರ ಅಡಿಯಲ್ಲಿ ಈ ಆಟದಲ್ಲಿ ಹಣಕಾಸಿನ ಅಪಾಯಗಳ ಸಂಭವವಿದೆ ಮತ್ತು ಇದು ಅಭ್ಯಾಸವಾಗಬಹುದು ಜವಾಬ್ದಾರಿಯುತವಾಗಿ ಆಟ ಆಡಿ ಎಂದೂ ಸಹ ಬರೆಯಲಾಗಿದೆ. ಆ ಮೂಲಕ ನಗರಸಭೆ ಯಾವ ಸಂದೇಶ ಸಾರಲು ಹೊರಟಿದೆ ಎಂಬ ಪ್ರಶ್ನೆ ಕಾಡುತ್ತಿದೆ.
ಆನ್‌ಲೈನ್ ಆಟದ ಚಟಕ್ಕೆ ಬಿದ್ದ ನೂರಾರು ಯುವಕರು ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ನಿದರ್ಶನಗಳು ಸಾಕಷ್ಟಿವೆ. ಈ ವಿಚಾರವಾಗಿಯೇ ಸಿಇಎನ್ ಠಾಣೆಗೆ ನಿತ್ಯ ಹತ್ತಾರು ಜನ ದೂರು ನೀಡಲು ಬರುತ್ತಾರೆ. ಅಂತಹ ಸಮಾಜ ಬಾಹಿರ ಕೃತ್ಯವನ್ನು ನಗರಸಭೆ ಪ್ರೋತ್ಸಾಹಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ನಗರ ನಿವಾಸಿ ಹೇಮಂತ್ ಅವರು ಪ್ರಶ್ನಿಸಿದ್ದಾರೆ.
ಲಕ್ಷಾಂತರ ರೂ. ಹೂಡಿಕೆ:
ಆನ್‌ಲೈನ್ ಗೇಮಿಂಗ್ ಕಂಪನಿಗಳು ತಮ ಪ್ರಚಾರಕ್ಕಾಗಿ ಸಾಮಾಜಿಕ ಮಾಧ್ಯಮಗಳಿಗೆ ಲಕ್ಷಾಂತರ ರೂಪಾಯಿ ಜಾಹೀರಾತು ನೀಡುತ್ತವೆ. ರಾಜ್ಯದ ಅನೇಕ ಯೂಟ್ಯೂಬರ್‌ಗಳಿಗೆ ಇಂತಹ ಜಾಹೀರಾತುಗಳೇ ಜೀವನಾಧಾರವಾಗಿದೆ. ನಗರದ ಮುಖ್ಯ ರಸ್ತೆಯಲ್ಲಿ ದೊಡ್ಡದಾಗಿ ಹೋಲ್ಡಿಂಗ್ ಹಾಕಲು ನಗರಸಭೆಗೆ ಎಷ್ಟು ಹಣ ಕೊಟ್ಟಿರಬಹುದೆಂದು ಅಂದಾಜಿಸಲು ಸಾಧ್ಯವಾಗುವುದಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಏನೇ ಆಗಲಿ ಸಮಾಜವನ್ನು ಸರಿ ದಾರಿಯತ್ತ ಕೊಂಡೊಯ್ಯಬೇಕಿದ್ದ ಅಧಿಕಾರಿಗಳೇ ಯಾರದೋ ಒತ್ತಡಕ್ಕೆ ಮಣಿದು ತಪ್ಪು ಸಂದೇಶ ರವಾನಿಸುವುದು ಸರಿಯಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಉಮೇಶ್ ಅವರು ಹೇಳಿದರು.
ಸಮಾಜದ ದಿಕ್ಕು ತಪ್ಪಿಸುವ ಜಾಹೀರಾತು ಫಲಕ ಅಳವಡಿಸಿರುವುದು ತಪ್ಪು. ಈ ವಿಚಾರ ಗಮನಕ್ಕೆ ಬಂದಿದ್ದು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
-ಸಿ.ಸತ್ಯಭಾಮ, ಜಿಲ್ಲಾಧಿಕಾರಿ
0 Comments