ಸಾವಿನಲ್ಲೂ ಒಂದಾದ ತಾಯಿ-ಮಗ
ಚನ್ನರಾಯಪಟ್ಟಣ: ತಾಲ್ಲೂಕಿನ ಹಿರೀಸಾವೆ ಹೋಬಳಿ ಕಬ್ಬಳಿ ಗ್ರಾಮದಲ್ಲಿ ಕುಟುಂಬ ಕಲಹದಿಂದ ಬೇಸತ್ತು ಸೋಮವಾರ ತಾಯಿ ಹಾಗೂ ಮಗ ಕಟ್ಟೆಗೆ ಬಿದ್ದು ಆತಹತ್ಯೆಗೆ ಶರಣಾಗಿದ್ದಾರೆ.
ಕಬ್ಬಳಿ ಗ್ರಾಮದ ಭರತ್ (35) ಹಾಗೂ ತಾಯಿ ಜಯಂತಿ (60) ಮೃತರು. ಭರತ್ ಗಂಡಸಿ ಹೋಬಳಿ ಬಾಗೂರನಹಳ್ಳಿ ಗ್ರಾಮದ ಗೀತಾ ಎಂಬುವರೊಂದಿಗೆ 8 ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ಆದರೆ ಪ್ರಾರಂಭದಿಂದಲೂ ಗಂಡ-ಹೆಂಡತಿ ನಡುವೆ ಹೊಂದಾಣಿಕೆ ಇರಲಿಲ್ಲ. ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಇತ್ತೀಚೆಗೆ ಗಂಡ ಹಾಗೂ ಅತ್ತೆಯೊಂದಿಗೆ ಜಗಳ ಮಾಡಿಕೊಂಡಿದ್ದ ಗೀತಾ ಗಂಡನ ಮನೆ ತೊರೆದು ತವರು ಮನೆಗೆ ಹೋಗಿದ್ದಳು. ಗಂಡ ಭರತ್ ಕರೆ ಮಾಡಿ ಹಲವು ಬಾರಿ ಕರೆದರೂ ಬಂದಿರಲಿಲ್ಲ. ಭರತ್‌ಗೆ ತನ್ನ ತಾಯಿ ಎಂದರೆ ತುಂಬಾ ಪ್ರೀತಿ ಇದ್ದು ಒಂದು ಕ್ಷಣವೂ ಬಿಟ್ಟಿರುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಿಕರಾದ ರಮೇಶ್, ಅಶೋಕ್ ಹಾಗೂ ಇತರರು ಸೇರಿ ಫೆ. 22 ಹಾಗೂ ಮಾ.8 ರಂದು ಎರಡು ಬಾರಿ ರಾಜಿ ಪಂಚಾಯಿತಿ ಮಾಡಿದ್ದು ಗಂಡ ಹಾಗೂ ಅತ್ತೆ ಜತೆಗೆ ಇರುವಂತೆ ಹೇಳಿದ್ದರು.
ಆದರೆ ಸೊಸೆ ಅದಕ್ಕೆ ಒಪ್ಪದೆ ಮತ್ತೆ ಜಗಳ ಮಾಡಿದ್ದರಿಂದ ಮನನೊಂದು ತಾಯಿ ಮಗ ನೀರಿಗೆ ಹಾರಿದ್ದಾರೆ. ಬೆಳಿಗ್ಗೆ 8 ಗಂಟೆಯಾದರೂ ಬಾಗಿಲು ತೆರೆಯದೆ ಇದ್ದುದರಿಂದ ಅಕ್ಕಪಕ್ಕದವರು ನೋಡಿದಾಗ ಯಾರೂ ಇಲ್ಲದಿರುವುದು ಗೊತ್ತಾಗಿದೆ. ಮನೆಯಲ್ಲಿ ಡೆತ್‌ನೋಟ್ ಸಿಕ್ಕಿದ್ದು ಅದರ ಆಧಾರದಡಿ ಕಟ್ಟೆಗೆ ತೆರಳಿ ಪರಿಶೀಲಿಸಿದಾಗ ಇಬ್ಬರ ಚಪ್ಪಲಿಗಳು ಸಿಕ್ಕಿವೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ. ಹಿರೀಸಾವೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಶವ ಹಸ್ತಾಂತರಿಸಲಾಯಿತು. ನಂತರ ಅಂತ್ಯಕ್ರಿಯೆ ನೆರವೇರಿತು.
ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ: ಸೋಮವಾರ ಬೆಳಗಿನ ಜಾವ 3.15ರ ಸುಮಾರಿನಲ್ಲಿ ತಾಯಿ ಹಾಗೂ ಮಗ ಗ್ರಾಮದ ದೇಗುಲದ ಮುಂದೆ ಕೈ ಮುಗಿದು ಅಲ್ಲಿಂದ ಕಟ್ಟೆ ಕಡೆಗೆ ರಸ್ತೆಯಲ್ಲಿ ನಡೆದು ಹೋಗಿರುವ ದೃಶ್ಯ ಮನೆಯೊಂದರ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಡೆತ್‌ನೋಟ್‌ನಲ್ಲಿ ಏನಿದೆ: ಮನೆಯಲ್ಲಿ ಡೆತ್‌ನೋಟ್ ಸಿಕ್ಕಿದ್ದು, ನಾನು ಮದುವೆಯಾಗಿರುವ ಗೀತಾ ಎಂಬವಳು ನನ್ನ ಕರ್ಮವನ್ನು ಮಾಡಬಾರದು. ನಾವು ಕಷ್ಟಪಟ್ಟು ಕಟ್ಟಿರುವ ಮನೆಯೊಳಗೆ ಬರಬಾರದು ಹಾಗೂ ನನ್ನ ಕರ್ಮಗಳನ್ನು ಆಕೆ ಯಾವುದೇ ಕಾರಣಕ್ಕೂ ಮಾಡಬಾರದು ಹಾಗೂ ಇನ್ನೂ ಹಲವು ವಿಚಾರಗಳನ್ನು ಬರೆದಿದ್ದಾನೆ ಎಂದು ಸಂಬಂಧಿಕರು ತಿಳಿಸಿದರು. ಹಿರೀಸಾವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0 Comments