ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತ ನಗರಸಭೆ ರಾಜಕೀಯ
ಹಾಸನ: ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಮೈತ್ರಿ ಒಪ್ಪದೆ ಅಧಿಕಾರ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಜೆಡಿಎಸ್‌ಗೆ ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಅವರನ್ನು ಸ್ಥಾನದಿಂದ ಕೆಳಗಿಳಿಸಲು ಬಿಜೆಪಿ ಸಹಾಯ ಅನಿವಾರ್ಯವಾಗಿದೆ.
ಹಾವು-ಮುಂಗುಸಿಯಂತಿರುವ ಬಿಜೆಪಿ ನಾಯಕರು ಜೆಡಿಎಸ್‌ನ ಕೋರಿಕೆಗೆ ಹೇಗೆ ಸ್ಪಂದಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಏ. 16 ಬುಧವಾರ ಚುನಾವಣೆ ನಡೆಯಲಿದೆ. ಹಾಲಿ ಉಪಾಧ್ಯಕ್ಷೆ 35ನೇ ವಾರ್ಡ್‌ನ ಲತಾದೇವಿ ಸುರೇಶ್ ಅವರು ಪಕ್ಷದ ಆಂತರಿಕ ಒಪ್ಪಂದದಂತೆ ತಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಉಪಾಧ್ಯಕ್ಷ ಚುನಾವಣೆಗೆ ಜೆಡಿಎಸ್‌ನಲ್ಲಿ ಸಿದ್ಧತೆ ನಡೆದಿದ್ದು ಅದೃಷ್ಟ ಯಾರಿಗೆ ಒಲಿಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಬುಧವಾರದ ಬಳಿಕ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಪ್ರಕ್ರಿಯೆ ಆರಂಭವಾಗಲಿದೆ. ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಅವರು ತಮ ಸ್ಥಾನಕ್ಕೆ ರಾಜೀನಾಮೆ ನೀಡದ ಹಿನ್ನಲೆಯಲ್ಲಿ ಅಸಮಾಧಾನಗೊಂಡಿರುವ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ಅವಿಶ್ವಾಸ ನಿರ್ಣಯಕ್ಕೆ ನಿರ್ಧರಿಸಿದ್ದಾರೆ. ಈ ಸಂಬಂಧ ಜೆಡಿಎಸ್‌ನ ಸದಸ್ಯರೆಲ್ಲ ಒಟ್ಟಾಗಿ ಅವಿಶ್ವಾಸ ನಿರ್ಣಯ ಸಭೆ ನಡೆಸುವಂತೆ ಪತ್ರ ಬರೆದಿದ್ದಾರೆ. ಅದಕ್ಕೆ ಅಧ್ಯಕ್ಷರಿಂದ ಯಾವ ಪ್ರತಿಕ್ರಿಯೆ ಬಾರದ ಹಿನ್ನಲೆಯಲ್ಲಿ ನಗರಸಭೆ ಆಯುಕ್ತರಿಗೂ ಪತ್ರ ಬರೆದಿದ್ದಾರೆ. ಪತ್ರ ಬರೆದ 10 ದಿನಗಳ ಒಳಗೆ ಪ್ರಕ್ರಿಯೆ ನಡೆಸಬೇಕಿರುವುದರಿಂದ ಮುಂದಿನ ನಾಲ್ಕೈದು ದಿನಗಳಲ್ಲಿ ಅವಿಶ್ವಾಸ ನಿರ್ಣಯ ಸಭೆ ನಡೆಯುವುದು ಖಚಿತವಾಗಿದೆ.
ನಗರಸಭೆ ಬಲಾಬಲ:
35 ಸದಸ್ಯ ಬಲದ ನಗರಸಭೆಯಲ್ಲಿ 17 ಜೆಡಿಎಸ್, 14 ಬಿಜೆಪಿ, 2 ಕಾಂಗ್ರೆಸ್ ಹಾಗು ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ. 2024ರ ಆಗಸ್ಟ್ 21 ರಂದು ನಡೆದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಶಾಸಕ ಹೆಚ್.ಪಿ. ಸ್ವರೂಪ್ ಸೇರಿ 34 ಮತಗಳು ಎಂ. ಚಂದ್ರೇಗೌಡ ಅವರಿಗೆ ಲಭಿಸಿದ್ದವು. ಆರು ತಿಂಗಳ ಬಳಿಕ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವಂತೆ ಎಂ. ಚಂದ್ರೇಗೌಡರಿಗೆ ಸೂಚಿಸಲಾಗಿತ್ತು. ಆದರೆ ಅವರು ಪಕ್ಷದ ವರಿಷ್ಠರಿಗೆ ಸೆಡ್ಡು ಹೊಡೆದು ಇನ್ನು ನಾಲ್ಕು ತಿಂಗಳು ಅಧ್ಯಕ್ಷ ಸ್ಥಾನ ಬಿಟ್ಟುಕೊಡುವುದಿಲ್ಲ ಎನ್ನುವುದು ಅಧ್ಯಕ್ಷ ಸ್ಥಾನ ಆಕಾಂಕ್ಷಿತರ ಹಾಗು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಕೆಂಗಣ್ಣಿಗೆ ಕಾರಣವಾಗಿದೆ. ಶತಾಯಗತಾಯ ಚಂದ್ರೇಗೌಡ ಅವರನ್ನು ಸ್ಥಾನದಿಂದ ಕೆಳಗಿಳಿಸಲೇಬೇಕೆಂದು ಅವರು ಪಣ ತೊಟ್ಟಿದ್ದಾರೆ. ಹೀಗಾಗಿ ನಗರಸಭೆ ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದೆ.
ಬಿಜೆಪಿ ಸಹಕಾರ ನೀಡುತ್ತಾ:
ನಗರಸಭೆ ಅಧ್ಯಕ್ಷರ ಆಯ್ಕೆಗೆ 18 ಸದಸ್ಯರ ಬೆಂಬಲ ಬೇಕು. ಶಾಸಕ ಹೆಚ್.ಪಿ. ಸ್ವರೂಪ್ ಅವರ ಮತ ಸೇರಿದರೆ ಅಷ್ಟು ಮತಗಳು ಜೆಡಿಎಸ್ ಬಳಿ ಇವೆ. ಆದರೆ ಅಧ್ಯಕ್ಷ ಸ್ಥಾನದಿಂದ ಚಂದ್ರೇಗೌಡ ಅವರನ್ನು ಕೆಳಗಿಳಿಸಲು 26 ಮತಗಳ ಅವಶ್ಯಕತೆ ಇರುವುದರಿಂದ ಬಿಜೆಪಿಯ ಸಹಕಾರ ಅವಶ್ಯವಾಗಿದೆ. ಆದ್ದರಿಂದಲೇ ಜೆಡಿಎಸ್ ವರಿಷ್ಠರು ಮೈತ್ರಿ ದಾಳ ಎಸೆಯಲು ಮುಂದಾಗಿದ್ದಾರೆ ಎನ್ನಲಾಗಿದೆ. 10 ತಿಂಗಳ ಬಳಿಕ ಅಧ್ಯಕ್ಷ ಸ್ಥಾನವನ್ನು ತಮಗೆ ಬಿಟ್ಟುಕೊಡಬೇಕೆಂದು ಪಟ್ಟು ಹಿಡಿದಿರುವ ಬಿಜೆಪಿಯವರು ಚಂದ್ರೇಗೌಡರ ವಿರುದ್ಧ ಮತ ಹಾಕುತ್ತಾರಾ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಶಾಸಕ ಸ್ವರೂಪ್ ಹೇಳುವುದು ಏನು:
ಏ. 16ರ ಬುಧವಾರ ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು, ಪಕ್ಷದ ವರಿಷ್ಠ ಹೆಚ್.ಡಿ. ರೇವಣ್ಣ ಅವರು ಸಭೆ ಕರೆದಿದ್ದಾರೆ. ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯದ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ಮಾಡುತ್ತೇವೆ. ಮೊದಲು ಉಪಾಧ್ಯಕ್ಷ ಸ್ಥಾನ ಚುನಾವಣೆ ನಡೆಯಲಿ. ಉಪಾಧ್ಯಕ್ಷರ ನೇತೃತ್ವದಲ್ಲಿ ಅವಿಶ್ವಾಸ ನಿರ್ಣಯ ಮಂಡನೆಗೆ ದಿನಾಂಕ ನಿಗದಿಪಡಿಸುತ್ತಾರೆ. ಈ ವಿಚಾರದಲ್ಲಿ ಬಿಜೆಪಿಯವರ ಸಹಕಾರ ಕೋರುತ್ತೇವೆ ಎಂದರು.
(ಹೇಳಿಕೆ)
ನಗರಸಭೆ ಅಧ್ಯಕ್ಷ ಸ್ಥಾನಕ್ಕೆ 10 ತಿಂಗಳ ಅವಧಿಗೆ ಜೆಡಿಎಸ್ ಅನ್ನು ಬೆಂಬಲಿಸುವಂತೆ ಹೈಕಮಾಂಡ್ ಸೂಚನೆ ಇತ್ತು. ಇನ್ನು 7 ತಿಂಗಳಷ್ಟೇ ಆಗಿರುವುದರಿಂದ ನಮ ಬೇಡಿಕೆಯನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಅಧ್ಯಕ್ಷರ ವಿರುದ್ಧ ಅವಿಶ್ವಾಸಕ್ಕೆ ಮುಂದಾಗಿರುವುದು ಜೆಡಿಎಸ್‌ನವರೇ ಹೊರತು ಬಿಜೆಪಿಯವರಲ್ಲ. ಮೂರು ತಿಂಗಳ ಅವಧಿಗೆ ಅಧ್ಯಕ್ಷರ ಬದಲಾವಣೆಗೆ ಜೆಡಿಎಸ್‌ಗೆ ನಮ ಅವಶ್ಯಕತೆಯಿದ್ದರೆ ಸಂಪರ್ಕಿಸಲಿ. ಇಲ್ಲಿವರೆಗೆ ಜೆಡಿಎಸ್‌ನ ಯಾರೂ ಚರ್ಚಿಸಿಲ್ಲ. ಈ ನಿಟ್ಟಿನಲ್ಲಿ ನಮಲ್ಲಿ ಯಾವುದೇ ಚರ್ಚೆಗಳಾಗಿಲ್ಲ.
-ಸಿದ್ದೇಶ್ ನಾಗೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ
ಎಂ. ಚಂದ್ರೇಗೌಡ ಅವರಿಗೆ ಅಧ್ಯಕ್ಷ ಸ್ಥಾನ ಕಲ್ಪಿಸುವಲ್ಲಿ ನನ್ನದು ಪಾತ್ರವಿದೆ. ಆದರೆ ಅವರು ಒಪ್ಪಂದದ ಪ್ರಕಾರ ಸ್ಥಾನವನ್ನು ಬಿಟ್ಟುಕೊಡುತ್ತಿಲ್ಲ. ನಮ ಪಕ್ಷದವರೇ ಆಗಿರುವುದರಿಂದ ಹಗುರವಾಗಿ ಮಾತನಾಡುವುದು ಸರಿಯಲ್ಲ. ಅವಿಶ್ವಾಸ ನಿರ್ಣಯಕ್ಕೆ ವರಿಷ್ಠರು ನಿರ್ಧರಿಸಿರುವುದರಿಂದ ಬಿಜೆಪಿಯವರ ಸಹಕಾರ ಕೋರುತ್ತೇವೆ.
-ಹೆಚ್.ಪಿ. ಸ್ವರೂಪ್, ಶಾಸಕ
ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಅಥವಾ ಉಪಾಧ್ಯಕ್ಷರ ಚುನಾವಣೆ ಸಂಬಂಧ ಈ ವರೆಗೆ ಜೆಡಿಎಸ್‌ನ ಯಾರು ನಮೊಂದಿಗೆ ಮಾತನಾಡಿಲ್ಲ. 10 ತಿಂಗಳ ಬಳಿಕ ಅಧ್ಯಕ್ಷ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಡುವುದಾಗಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ವಿಪಕ್ಷ ನಾಯಕ ಆರ್. ಅಶೋಕ್ ಅವರಿಗೆ ಮಾತು ಕೊಟ್ಟಿದ್ದಾರೆ. ಚಂದ್ರೇಗೌಡರಿಗೆ ಬೆಂಬಲ ನೀಡಬೇಕೋ ಬಿಡಬೇಕೋ ಎನ್ನುವ ಬಗ್ಗೆ ಇನ್ನು ಹೈಕಮಾಂಡ್‌ನಿಂದ ನಿರ್ದೇಶನ ಬಂದಿಲ್ಲ.
-ಆರ್. ಮೋಹನ್, ನಗರಸಭೆ ಬಿಜೆಪಿ ಸದಸ್ಯ

0 Comments