ನಗದು ಸೇರಿ 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ಚನ್ನರಾಯಪಟ್ಟಣ: ಮನೆ ಮುಂದಿನ ನಿಗದಿತ ಜಾಗದಲ್ಲಿಟ್ಟಿದ್ದ ಬೀಗದ ಕೀ ನೆರವಿನಿಂದ ಸುಲಭವಾಗಿ ಪ್ರವೇಶಿರುವ ಕಳ್ಳರು ನಗದು ಸೇರಿ 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದಿರುವ ಘಟನೆ ಪಟ್ಟಣದ ಗಾಂಧಿ ವೃತ್ತದಲ್ಲಿ ನಡೆದಿದೆ.
ನಂಜುಂಡೇಗೌಡ ಹಾಗು ರಾಜಮ್ಮ ಅವರ ಮನೆಯಲ್ಲಿ ಜೂ. 8 ರಂದು ಕಳುವಾಗಿದೆ. ನಂಜುಂಡೇಗೌಡ ಅವರು ಗೃಹ ಪ್ರವೇಶ ಸಮಾರಂಭ ಹಿನ್ನಲೆಯಲ್ಲಿ ಬೆಳಿಗ್ಗೆ 7 ಗಂಟೆಗೆ ಚಗಚಗೆರೆಗೆ ತೆರಳಿದ್ದರು. ಪತ್ನಿ ರಾಜಮ್ಮ ಬೆಳಿಗ್ಗೆ 9 ಗಂಟೆಗೆ ಮದುವೆ ನಿಮಿತ್ತ ಪಟ್ಟಣದ ಪೂಜಾ ಕಲ್ಯಾಣ ಮಂಟಪಕ್ಕೆ ತೆರಳಿದ್ದರು. ಎಂದಿನಂತೆ ಮನೆ ಕೀಯನ್ನು ಅಲ್ಲೇ ಇಟ್ಟಿದ್ದರಿಂದ ಗಮನಿಸಿದ್ದ ಕಳ್ಳರು ಬಂದು ಕೀ ನೆರವಿನಿಂದ ಒಳಪ್ರವೇಶಿಸಿದ್ದಾರೆ. ಬೀರುವಿನಲ್ಲಿದ್ದ 4.50 ಲಕ್ಷ ರೂ. ನಗದು, 60 ಗ್ರಾಂ ತೂಕದ ಅಂದಾಜು 6 ಲಕ್ಷ ರೂ. ಮೌಲ್ಯದ ವಿವಿಧ ಬಗೆಯ ಚಿನ್ನಾಭರಣ, 120 ಗ್ರಾಂ ತೂಕದ ಅಂದಾಜು 1.50 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣ ಕದ್ದಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

0 Comments