ತಾರಕಕ್ಕೇರಿದ ಚಂಗಡಿಹಳ್ಳಿ ಮಠದ ಆಸ್ತಿ ವಿವಾದ


ಹಾಸನ: ಸಕಲೇಶಪುರ ತಾಲ್ಲೂಕಿನ ಚಂಗಡಿಹಳ್ಳಿ ವೀರಶೈವ ವಿರಕ್ತ ಮಠದ ಜಾಗದ ವಿಚಾರವಾಗಿ ಗ್ರಾಮಸ್ಥರು ಹಾಗೂ ಸ್ವಾಮೀಜಿ ನಡುವೆ ಜಟಾಪಟಿ ಶುರುವಾಗಿದ್ದು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಇದು ಸ್ವತಂತ್ರ ಮಠವೆಂದು ಗ್ರಾಮಸ್ಥರು ವಾದಿಸುತ್ತಿದ್ದು, ಚಿತ್ರದುರ್ಗದ ಮುರಘಾ ಮಠಕ್ಕೆ ಸೇರಿದೆ ಎಂದು ಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ ಹೇಳುತ್ತಿದ್ದಾರೆ. ಎರಡೂ ಕಡೆಯಿಂದ ವಿವಾದ ತಾರಕಕ್ಕೇರಿರುವ ಹಿನ್ನಲೆ ಪ್ರಕರಣ ಗಂಭೀರ ಸ್ವರೂಪ ಪಡೆದಿದೆ.
ಅತ್ಯಾಚಾರ ಆರೋಪದಡಿ ಚಿತ್ರದುರ್ಗದ ಮುರುಘಾ ಮಠದ ರಾಜೇಂದ್ರ ಸ್ವಾಮೀಜಿ ಬಂಧನದ ನಂತರ ಮಧ್ಯ ಪ್ರವೇಶಿಸಿದ ಸರ್ಕಾರ ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿದೆ. ಆಡಳಿತಾಧಿಕಾರಿ ಕಡೆಯವರು ಅಕ್ರಮವಾಗಿ ಮರಗಳನ್ನು ಕಡಿದು ಮಾರಾಟ ಮಾಡಿದ್ದಾರೆ. ಪೂಜಾ ಸಾಮಗ್ರಿ, 20 ಲಕ್ಷ ರೂ. ಬೆಲೆಯ ಪಂಪ್‌ಸೆಟ್, ಪೈಪ್‌ಗಳನ್ನು ಕಳವು ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಮತ್ತೊಂದೆಡೆ ಸ್ವಾಮೀಜಿ ಅವರು ಮಠದ ಆಸ್ತಿ ಕಬಳಿಕೆ ಮಾಡಿದ್ದಾರೆ. ಚಿತ್ರದುರ್ಗದ ಬೃಹನ್ ಮಠದ ಪದಾಧಿಕಾರಿಗಳಿಂದ ಹಣ ದುರುಪಯೋಗ ಆಗಿದೆ. 300 ಎಕರೆ ಮಠದ ಆಸ್ತಿಯನ್ನು ಪರಾಭಾರೆ ಮಾಡಿದ್ದಾರೆ. ಕೇವಲ 36 ಎಕರೆ ಮಾತ್ರ ಉಳಿದಿದೆ ಎಂದು ಸಮುದಾಯದ ಮುಖಂಡರ ಆರೋಪಿಸಿದ್ದಾರೆ. ಈ ಬಗ್ಗೆ ಯಸಳೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಮುಖಂಡರು ತಿಳಿಸಿದ್ದಾರೆ.
ಮತ್ತೊಂದು ಕಡೆ ಮೋಕ್ಷಪತಿ ಸ್ವಾಮೀಜಿ ಸಹ ಗ್ರಾಮಸ್ಥರಿಗೆ ಸೆಡ್ಡು ಹೊಡೆದಿದ್ದು, ಸಕಲೇಶಪುರ ಕೋರ್ಟ್‌ನಲ್ಲಿ ನಮ್ಮ ಪರ ಆದೇಶವಾಗಿದೆ. ಅದರಂತೆ ತೋಟದಲ್ಲಿ ಕೆಲಸ ಮಾಡುತ್ತಿದ್ದೇವೆ‌. ಈ ಮಠ ಚಿತ್ರದುರ್ಗದ ಬೃಹನಮಠಕ್ಕೆ ಸೇರಿದ್ದು. ಗ್ರಾಮಸ್ಥರೇ ಮಠದ ಆಸ್ತಿಯನ್ನು ಒತ್ತುವರಿ ಮಾಡಿದ್ದಾರೆ. ಆಸ್ತಿ ಉಳಿಸಲು ಮರಗಳನ್ನು ಕಡಿದು ಬೇಲಿ ಹಾಕಲಾಗುತ್ತಿದೆ. ಕಾನೂನು ಮೀರಿ ಏನೂ ಮಾಡುತ್ತಿಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

Post a Comment

0 Comments