ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಘಾಟಿಯಲ್ಲಿ ರೈಲು ಸಂಚಾರ ಪರಿಸ್ಥಿತಿಯನ್ನು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ್ ಪರಿಶೀಲಿಸಿದರು.
ರೈಲ್ವೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿದ ಅವರು, ಘಾಟಿ ಪ್ರದೇಶದಲ್ಲಿ ರೈಲ್ವೆ ಹಳಿ ಮೇಲೆ ಮಣ್ಣು ಕುಸಿಯದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದರು.
ಕಳೆದ ವರ್ಷ ಸುರಿದ ಭಾರಿ ಮಳೆಗೆ ಬೆಂಗಳೂರು-ಮಂಗಳೂರು ರೈಲು ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಆ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸ್ಥಳೀಯ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.
ಜೊತೆಗೆ ಅಮೃತ ಭಾರತ್ ನಿಲ್ದಾಣ ಯೋಜನೆಯಡಿ ಪುನರಾಭಿವೃದ್ಧಿ ಆಗುತ್ತಿರುವ ಸುಬ್ರಹ್ಮಣ್ಯ ರೋಡ್, ಸಕಲೇಶಪುರ ಮತ್ತು ಹಾಸನ ರೈಲು ನಿಲ್ದಾಣಗಳನ್ನು ಪರಿಶೀಲಿಸಿದರು. ನಿಲ್ದಾಣ ಪುನರಾಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಿ, ಎಲ್ಲಾ ಕಾರ್ಯಗಳು ಸಕಾಲದಲ್ಲಿ ಹಾಗೂ ಉತ್ತಮ ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕೆಂದು ಸೂಚಿಸಿದರು.
ಮೈಸೂರು ವಿಭಾಗದಲ್ಲಿ ನಡೆಯುತ್ತಿರುವ ವಿದ್ಯುದ್ದೀಕರಣ ಕಾಮಗಾರಿಗಳನ್ನೂ ಪರಿಶೀಲಿಸಿದರು. ಕಾರ್ಯಾಚರಣೆಯ ಸುರಕ್ಷತೆ ಮತ್ತು ದಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ವಕ್ರಾಕೃತಿಗಳು, ಸೇತುವೆಗಳು ಮತ್ತು ಹಳಿ ನಿಯತಾಂಕಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯಗಳ ಪರಿಶೀಲನೆ ನಡೆಸಿದರು.
ಮೈಸೂರು ವಿಭಾಗದ ಡಿಆರ್‌ಎಂ ಮುದಿತ್ ಮಿತ್ತಲ್, ಗತಿಶಕ್ತಿ ಮುಖ್ಯ ಯೋಜನಾ ವ್ಯವಸ್ಥಾಪಕ ಆನಂದ್ ಭಾರತಿ ಹಾಗೂ ಮೈಸೂರು ವಿಭಾಗದ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.
0 Comments