ಲೈಂಗಿಕ ದೌರ್ಜನ್ಯ ಪ್ರಕರಣಹಿರಿಯೂರಿನಲ್ಲಿ ಸೆರೆಯಾದ ದೇವರಾಜೇಗೌಡ

ಹಾಸನ: ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ವಕೀಲ ಜಿ.ದೇವರಾಜೇಗೌಡ ಅವರನ್ನು ಶುಕ್ರವಾರ ಸಂಜೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಕೀಲ ದೇವರಾಜೇಗೌಡ ವಿರುದ್ಧ ಏ. ೧ರಂದು ಹೊಳೆನರಸೀಪುರ ಠಾಣೆಯಲ್ಲಿ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ದೂರು ನೀಡಿದ್ದರು. ಹತ್ತು ತಿಂಗಳ ಹಿಂದೆ ಪರಿಚಯವಾಗಿದ್ದ ದೇವರಾಜೇಗೌಡ ಆಗಾಗ ಫೋನ್ ಮಾಡಿ ಹೊಳೆನರಸೀಪುರದಲ್ಲಿ ಮನೆ ಕಟ್ಟಿಸಿಕೊಡುತ್ತೇನೆಂದು ನಂಬಿಸಿದ್ದ. ನಂತರ ಕಾರಿನಲ್ಲಿ ಹಾಸನಕ್ಕೆ ಕರೆದುಕೊಂಡು ಹೋಗಿ ಹೇಳಿದ ಹಾಗೆ ಕೇಳಿದರೆ ಮನೆ ನಿರ್ಮಾಣ ಕೆಲಸ ಬೇಗ ಮುಗಿಸುತ್ತೇನೆಂದು ದೈಹಿಕವಾಗಿ ದುರುಪಯೋಗ ಮಾಡಿಕೊಂಡಿದ್ದ. ನಂತರ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂದು ಆರೋಪಿಸಿ ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ಸಂಬಂಧ ವಿಚಾರಣೆಗೆ ಕರೆದರೂ ದೇವರಾಜೇಗೌಡ ಹಾಜರಾಗಿರಲಿಲ್ಲ ಎನ್ನಲಾಗಿದೆ.
ಹೊಳೆನರಸೀಪುರ ಪೊಲೀಸರ ಮಾಹಿತಿ ಮೇರೆಗೆ ಹಿರಿಯೂರು ಪೊಲೀಸರು ದೇವರಾಜೇಗೌಡರನ್ನು ವಶಕ್ಕೆ ಪಡೆದಿದ್ದು, ತಡರಾತ್ರಿ ಠಾಣೆಗೆ ಕರೆ ತಂದಿದ್ದಾರೆ ಎನ್ನಲಾಗಿದೆ.
ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಪೆನ್‌ಡ್ರೈವ್ ಬಿಡುಗಡೆ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕೈವಾಡವಿದೆ ಎಂದು ದೇವರಾಜೇಗೌಡ ಗಂಭೀರ ಆರೋಪ ಮಾಡಿದ್ದರು.

Post a Comment

0 Comments