ಹಾಸನ : ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಬಳಿಕ ಬಹುಜನ ಸಮಾಜ ಪಕ್ಷದ ಮುಖಂಡರು ಅಚ್ಚರಿಗೆ ಒಳಗಾಗಿದ್ದು, ಸಾಂಪ್ರದಾಯಿಕ ಮತಗಳು ಎಲ್ಲಿಗೆ ಸ್ಥಾನಪಲ್ಲಟ ಆದವು ಎಂಬ ಚರ್ಚೆಗೆ ಇಳಿದಿದ್ದಾರೆ.
2019ರಲ್ಲಿ 38,400 ಮತ ಗಳಿಸಿದ್ದ ಬಿಎಸ್‌ಪಿ ಅಭ್ಯರ್ಥಿ ಗಂಗಾಧರ ಬಹುಜನ್ ಅವರು 2024ರ ಚುನಾವಣೆಯಲ್ಲಿ 12,173 ಸಾವಿರ ಮತಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಒಟ್ಟು ಚಲಾವಣೆಯಾದ ಮತದಾನಕ್ಕೆ ಹೋಲಿಸಿದರೆ ಕೇವಲ ಶೇ. 2.50 ರಷ್ಟು ಮತಗಳು ಬಂದಿವೆ. ಇದರಿಂದ ಬಿಎಸ್‌ಪಿಯ ಜನಪ್ರಿಯತೆ ಹಾಗು ಅದರ ಸಾಂಪ್ರದಾಯಿಕ ಮತ ಬ್ಯಾಂಕ್ ಎಲ್ಲೋ ಒಂದು ಕಡೆ ಪಲ್ಲಟಗೊಳ್ಳುತ್ತಿದೆ ಎಂಬುದು ಗೋಚರಿಸುತ್ತಿದ್ದು, ಇದಕ್ಕೆ ಕಾರಣ ಏನು, ಏಕೆ ಹೀಗಾಯಿತು ಎಂಬ ಆತಾವಲೋಕನಕ್ಕೆ ಪಕ್ಷದ ಮುಖಂಡರು ಮುಂದಾಗಿದ್ದಾರೆ.
ಜಿಲ್ಲೆಯಲ್ಲಿ ಬಿಎಸ್‌ಪಿ ಬಲಾಬಲ:
ಜಿಲ್ಲೆಯಲ್ಲಿ ರಾಜಕೀಯವಾಗಿ ಬಿಜೆಪಿ, ಜೆಡಿಎಸ್ ಹಾಗು ಕಾಂಗ್ರೆಸ್ ಪಕ್ಷಗಳು ಬಲಿಷ್ಠವಾಗಿದ್ದು ನಾಲ್ಕನೇ ಸ್ಥಾನದಲ್ಲಿ ಬಿಎಸ್‌ಪಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿಂದಿನ ಅನೇಕ ಚುನಾವಣೆಗಳಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಸೋಲು ಗೆಲುವಿನಲ್ಲಿ ಬಿಎಸ್‌ಪಿ ತನ್ನದೇಯಾದ ಪಾತ್ರ ವಹಿಸಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಬಿಎಸ್‌ಪಿ ಕಾರ್ಯಕರ್ತರಿದ್ದಾರೆ. ಮುಖ್ಯವಾಗಿ ಪರಿಶಿಷ್ಟ ಜಾತಿಯ ಮತಗಳೇ ಬಿಎಸ್‌ಪಿಗೆ ನಿರ್ಣಾಯಕ. ಬೇಲೂರು, ಅರಕಲಗೂಡು ಹಾಗು ಸಕಲೇಶಪುರ ತಾಲ್ಲೂಕಿನಲ್ಲಿ ಬಿಎಸ್‌ಪಿಗೆ ಕಟ್ಟಾ ಅಭಿಮಾನಿಗಳಿದ್ದಾರೆ. ಆದರೆ ಈ ಚುನಾವಣೆಯಲ್ಲಿ ಪಕ್ಕಾ ಮತಗಳು ಬಾರದೆ ಇರಲು ಕಾರಣ ಸೂಕ್ಷ್ಮವಾಗಿದೆ. 1994ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದ ಎಂ.ಡಿ.ಗಂಗಣ್ಣ ಅವರು ಪಕ್ಷಕ್ಕೆ ಬಲ ತುಂಬಿದ್ದರು. ಅದೇ ರೀತಿ 2004ರಲ್ಲಿ ಸ್ಪರ್ಧಿಸಿದ್ದ ಏಜಾಜ್ ಅಹದ್ ಫಾರೂಕಿ ಅವರು 56 ಸಾವಿರ ಮತ ಪಡೆಯುವ ಮೂಲಕ ಪಕ್ಷ ಸಂಘಟನೆಯ ಭರವಸೆ ಮೂಡಿಸಿದ್ದರು. 2014ರಲ್ಲಿ ಎ.ಪಿ.ಅಹದ್ ಅವರು 19 ಸಾವಿರ ಮತ ಗಳಿಸಿದ್ದರು. 2019ರಲ್ಲಿ ಗಂಗಾಧರ ಬಹುಜನ್ ಅವರು 38 ಸಾವಿರ ಮತ ಗಳಿಸಿ ಈ ಬಾರಿ ಕೇವಲ 12 ಸಾವಿರ ಮತಗಳಿಗೆ ತೃಪ್ತಿಟ್ಟಿದ್ದಾರೆ.
ಹಿನ್ನಡೆಗೆ ಕಾರಣ:
ಜಿಲ್ಲೆಯಲ್ಲಿ ಬಿಎಸ್‌ಪಿ ಮತ ಗಳಿಕೆ ಹಿನ್ನಡೆಗೆ ಪ್ರಮುಖ ಕಾರಣ ಕಾಂಗ್ರೆಸ್ ಎಂದು ಪರಾಜಿತ ಅಭ್ಯರ್ಥಿ ಗಂಗಾಧರ ಬಹುಜನ ಅವರೇ ಹೇಳುತ್ತಾರೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಇರಲಿಲ್ಲ. ಆಗ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದರಿಂದ ಹೆಚ್ಚಿನ ಮತಗಳು ಬಿಎಸ್‌ಪಿಗೆ ಬಂದಿದ್ದವು. ಆದರೆ ಈ ಬಾರಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಇದ್ದಿದ್ದರಿಂದ ಹಾಗು ಜಿಲ್ಲೆಯ ಮತದಾರರು ಕೇಂದ್ರದಲ್ಲಿ ಸಮಿಶ್ರ ಸರ್ಕಾರ ರಚನೆಯಾಗುವುದಾದರೆ ಕಾಂಗ್ರೆಸ್ ನೇತೃತ್ವದಲ್ಲೇ ಆಗಲಿ ಎಂಬ ಭಾವನೆಯಿಂದ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಜೊತೆಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಪರಿಣಾಮ ಬೀರಿವೆ ಎಂದು ವಿಶ್ಲೇಷಿಸಿದರು.
ಪ್ರಮುಖವಾಗಿ ಈ ಚುನಾವಣೆಯಲ್ಲಿ ಸಂವಿಧಾನ ಬದಲಾವಣೆ, ಮೀಸಲಾತಿ ರದ್ದತಿ ಕುರಿತ ವಿಚಾರಗಳು ಮುನ್ನಲೆಗೆ ಬಂದವು. ಕೇಂದ್ರದಲ್ಲಿ ಮತ್ತೊಮೆ ನರೇಂದ್ರ ಮೋದಿ ಪ್ರಧಾನಿಯಾದರೆ ಹಿಂದುಳಿದ ವರ್ಗಗಳಿಗೆ ಸಮಸ್ಯೆಯಾಗುತ್ತದೆ ಎಂಬ ಭಯದಿಂದ ಬಿಎಸ್‌ಪಿಯ ಸಾಂಪ್ರದಾಯಿಕ ಮತಗಳು ಕಾಂಗ್ರೆಸ್‌ಗೆ ಬಿದ್ದವು ಎಂಬ ಚರ್ಚೆಗಳು ನಡೆಯುತ್ತಿವೆ.
ಪ್ರಸ್ತುತ ಸಂದರ್ಭದಲ್ಲಿ ಹಾಸನ ಮಾತ್ರವಲ್ಲದೆ ರಾಜ್ಯಾದ್ಯಂತ ಬಿಎಸ್‌ಪಿ ಪರಿಸ್ಥಿತಿ ಡೋಲಾಯಮಾನವಾಗಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಬಿಎಸ್‌ಪಿಯಿಂದ ಸ್ಪರ್ಧಿಸಿ ಗೆದ್ದಿದ್ದ ಎನ್.ಮಹೇಶ್ ಅವರು ಪಕ್ಷದೊಳಗಿನ ಆಂತರಿಕ ಕಚ್ಚಾಟದಿಂದ ಹೊರಬಂದು ಬಿಜೆಪಿ ಸೇರಿದರು. ಹಾಸನದಲ್ಲೂ ಎನ್.ಮಹೇಶ್ ಅವರಿಗೆ ಅಭಿಮಾನಿಗಳಿದ್ದು, ಅವರೂ ಸಹ ಬಿಎಸ್‌ಪಿಯಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಗಂಭೀರವಾಗಿ ಪರಿಗಣಿಸಲಿಲ್ಲ:
ಈ ಬಾರಿಯ ಚುನಾವಣೆಯನ್ನು ಜಿಲ್ಲೆಯ ಬಿಎಸ್‌ಪಿ ಮುಖಂಡರು ಗಂಭೀರವಾಗಿ ಪರಿಗಣಿಸಲಿಲ್ಲ ಎನ್ನಲಾಗುತ್ತಿದೆ. ರಾಷ್ಟ್ರ ಮಟ್ಟದಲ್ಲೇ ಪಕ್ಷ ಹಿನ್ನಡೆ ಅನುಭವಿಸಿರುವ ಹಿನ್ನಲೆ ಸ್ಥಳೀಯರು ಚುನಾವಣೆಯತ್ತ ಆಸಕ್ತಿ ವಹಿಸಲಿಲ್ಲ. ನಾಮಪತ್ರ ಸಲ್ಲಿಕೆ ಹಾಗು ಎಲ್ಲಾ ತಾಲ್ಲೂಕುಗಳಲ್ಲಿ ಒಂದೊಂದು ಬಾರಿ ಸಭೆ ನಡೆಸಿದ್ದು ಬಿಟ್ಟರೆ ಮತದಾರರನ್ನು ಸೆಳೆಯಲು ಹೆಚ್ಚಿನ ಶ್ರಮ ಹಾಕಲಿಲ್ಲ. ಹೀಗಾಗಿ ಬಿಎಸ್‌ಪಿ ಹಿಂದಿನ ಚುನಾವಣೆಗಿಂತ ಕಳಪೆ ಫಲಿತಾಂಶ ಕಂಡಿದೆ ಎಂಬ ಮಾತುಗಳು ಕೇಳಿಬಂದಿವೆ.
(ಹೇಳಿಕೆ)
ಚುನಾವಣೆಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತವೆ. ಅಧಿಕೃತ ವಿರೋಧ ಪಕ್ಷವಾಗುವ ಅರ್ಹತೆಯನ್ನು ಕಳೆದುಕೊಂಡಿದ್ದ ಕಾಂಗ್ರೆಸ್ ಪುಟಿದೆದ್ದಿದೆ. ಅದೇ ರೀತಿ ಬಿಎಸ್‌ಪಿ ಸಹ ಮುಂದಿನ ದಿನಗಳಲ್ಲಿ ಚೇತಕರಿಕೆ ಕಾಣುತ್ತದೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಇದ್ದುದ್ದು ಮತ್ತು ಗ್ಯಾರಂಟಿ ಯೋಜನೆಗಳು ಬಿಎಸ್‌ಪಿ ಮತಗಳು ಚದುರಲು ಕಾರಣವಾಗಿದೆ.
-ಗಂಗಾಧರ ಬಹುಜನ್, ಬಿಎಸ್‌ಪಿ ಪರಾಜಿತ ಅಭ್ಯರ್ಥಿ
0 Comments