ಹಾಸನ: ಎತ್ತಿನಹೊಳೆ ಯೋಜನೆಗಾಗಿ ಅರಣ್ಯ ಇಲಾಖೆಯಿಂದ 500 ಎಕರೆ ಪ್ರದೇಶವನ್ನು ರಾಜ್ಯ ಸರ್ಕಾರ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದು, ಅದಕ್ಕಾಗಿ ಜೂ. 19 ರಿಂದ ಜಿಲ್ಲೆಯಲ್ಲಿ ಸರ್ವೆ ಕಾರ್ಯ ನಡೆಯಲಿದೆ.
ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವಾಕಾಂಕ್ಷಿ ಎತ್ತಿನಹೊಳೆ ಕಾಮಗಾರಿ ಕೈಗೆತ್ತಿಕೊಂಡಿದೆ. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾಮಗಾರಿಗಾಗಿ ಅರಣ್ಯ ಇಲಾಖೆಯ 500 ಎಕರೆ ಜಾಗ ಅವಶ್ಯಕತೆಯಿದ್ದು, ಅದಕ್ಕೆ ಪರ್ಯಾಯವಾಗಿ 500 ಎಕರೆ ಕಂದಾಯ ಜಮೀನನ್ನು ಅರಣ್ಯ ಇಲಾಖೆಗೆ ನೀಡುವುದಾಗಿ ಜಲ ಸಂಪನೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ, ಕಂದಾಯ ಸಚಿವ ಕೃಷ್ಣಬೈರೇಗೌಡ ಹಾಗು ಇಲಾಖೆಯ ಕಾರ್ಯದರ್ಶಿಗಳ ಸಮುಖದ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದ್ದು ಕಂದಾಯ ಹಾಗು ಅರಣ್ಯ ಇಲಾಖೆ ಜಂಟಿ ಸರ್ವೆ ಮೂಲಕ ಭೂಮಿ ಸರ್ವೆಗೆ ಸಿದ್ಧತೆ ನಡೆಸಿವೆ. ಈ ವಿಚಾರವಾಗಿ ಜಿಲ್ಲಾಡಳಿತಕ್ಕೆ ನಿರ್ದೇಶನ ಬಂದಿದ್ದು, ಜೂ. 19 ರಿಂದ ಜಂಟಿ ಸರ್ವೆ ನಡೆಯಲಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಬ್‌ಕುಮಾರ್ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 300 ಎಕರೆ:
ಜಿಲ್ಲಾ ವ್ಯಾಪ್ತಿಯಲ್ಲಿ 300 ಎಕರೆ ಅರಣ್ಯ ಭೂಮಿಯನ್ನು ಯೋಜನೆಗಾಗಿ ನೀಡಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಕಲೇಶಪುರ ತಾಲ್ಲೂಕಿನಲ್ಲಿ ಈಗಾಗಲೇ ಕೆಲಸ ಪೂರ್ಣಗೊಂಡಿದ್ದು ಆ ವ್ಯಾಪ್ತಿಯಲ್ಲಿ ಜಮೀನು ನೀಡುವ ಅವಶ್ಯಕತೆಯಿಲ್ಲ. ಬೇಲೂರು, ಅರಸೀಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಅರಣ್ಯ ಜಾಗ ಬಿಟ್ಟುಕೊಡಬೇಕಿದ್ದು ಜಿಲ್ಲೆಯ 300 ಎಕರೆ ಜಾಗ ಗುರುತಿಸಲಾಗಿದೆ. ಉಳಿದ 200 ಎಕರೆ ಬೇರೆ ಜಿಲ್ಲೆಗೆ ಸೇರಿದೆ.
ಎತ್ತಿನಹೊಳೆ ಯೋಜನೆಯಲ್ಲಿ ಆರಂಭಿಕ ಹಂತದ ಕಾಮಗಾರಿ ಪೂರ್ಣಗೊಂಡ ಸ್ಥಳದಲ್ಲಿ ಪ್ರಾಯೋಗಿಕ ನೀರು ಸಹ ಹರಿಸಲಾಗಿದೆ. ಇತ್ತೀಚೆಗಷ್ಟೇ ಜಲಸಂಪನೂಲ ಇಲಾಖೆ ಹಿರಿಯ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡರೆ ವೇಗವಾಗಿ ಕೆಲಸ ಮುಗಿಸಬಹುದು ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
0 Comments