ಹಾಸನ : ನಗರ ಸೇರಿ ಜಿಲ್ಲೆಯ ವಿವಿಧ ಮಾರುಕಟ್ಟೆಗಳಲ್ಲಿ ಕಡು ನೀಲಿ ಸುಂದರಿ ನೇರಳೆ ಹಣ್ಣು ಲಗ್ಗೆಯಿಟ್ಟಿದ್ದು ಸಾರ್ವಜನಿಕರಿಂದ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ.
ಹಣ್ಣುಗಳ ರಾಜ ಮಾವಿನ ಹಣ್ಣಿನ ಬಳಿಕ ಮಾರುಕಟ್ಟೆಗೆ ನೇರಳೆ ದಾಂಗುಡಿ ಇಟ್ಟಿದೆ. ಮಾವಿನಂತೆಯೇ ನಿರ್ದಿಷ್ಟ ಋತುವಿನಲ್ಲಿ ಮಾತ್ರ ಲಭ್ಯವಾಗುವ ನೇರಳೆ ಈಗ ಎಲ್ಲರ ಫೇವರಿಟ್. ಕಡು ನೀಲಿ ಬಣ್ಣದ ನೇರಳೆ ಹಣ್ಣಿಗೆ ನಗರದಲ್ಲಿ ಬೇಡಿಕೆ ಹೆಚ್ಚಾಗಿದೆ. ಒಂದರಿಂದ ಒಂದೂವರೆ ತಿಂಗಳ ವರೆಗೆ ಮಾತ್ರ ನೇರಳೆ ಹಣ್ಣಿನ ಮಾರಾಟ ಇರಲಿದ್ದು, ಇದಕ್ಕಾಗಿ ವರ್ಷದಿಂದ ಕಾಯುವವರು ಸಾಕಷ್ಟು ಜನರಿದ್ದಾರೆ. ಹೆಚ್ಚಾಗಿ ಕಾಡಿನಲ್ಲೇ ಬೆಳೆಯುವ ಹಣ್ಣು ಇದಾಗಿದೆ. ಹಾಸನದ ವ್ಯಾಪಾರಿಗಳು ಚಿಕ್ಕಬಳ್ಳಾಪುರ ಜಿಲ್ಲೆಯಿಂದ ನೇರಳೆ ಹಣ್ಣನ್ನು ಖರೀದಿಸುತ್ತಾರೆ.
ಕೆ.ಜಿ.ಗೆ 200 ರೂ.:
ಪ್ರತಿ ಕೆ.ಜಿ.ನೇರಳೆ ಹಣ್ಣಿಗೆ 200 ರೂ. ದರ ನಿಗದಿಪಡಿಸಲಾಗಿದೆ. ತಳ್ಳುಗಾಡಿಗಳು, ದ್ವಿಚಕ್ರ ವಾಹನಗಳಲ್ಲಿ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ. ನಗರದ ಕಟ್ಟಿನಕೆರೆ ಮಾರುಕಟ್ಟೆ, ಕಸ್ತೂರ ಬಾರ ರಸ್ತೆ, ಸಾಲಗಾಮೆ ರಸ್ತೆ, ಸ್ಲೇಟರ್‌ರಸ ಹಾಲ್, ಬಿ.ಎಂ.ರಸ್ತೆ, ಸಂತೆಪೇಟೆ ವೃತ್ತದಲ್ಲಿ ನೇರಳೆ ಹಣ್ಣು ಮಾರಾಟ ಮಾಡಲಾಗುತ್ತಿದೆ. ಕೆ.ಜಿ.ಗೆ 200 ರೂ.ನಂತೆ ಮಾರಾಟ ಮಾಡುತ್ತಿದ್ದು ನಿತ್ಯ 25 ರಿಂದ 30 ಕೆ.ಜಿ. ನೇರಳೆ ಮಾರಾಟವಾಗುತ್ತದೆ ಎನ್ನುತ್ತಾರೆ ನಗರ ಬಸ್ ನಿಲ್ದಾಣ ಸಮೀಪ ತಳ್ಳುಗಾಡಿ ವ್ಯಾಪಾರಿ ರಮೇಶ್. ಒಂದೇ ಕಡೆ ನಿಂತು ಮಾರಾಟ ಮಾಡುವುದಕ್ಕಿಂತ ಬೀದಿಯಲ್ಲಿ ಸಂಚಾರದ ಮೂಲಕ ಮಾರಾಟ ಮಾಡಿದರೆ ಹೆಚ್ಚು ಲಾಭವಾಗುತ್ತದೆ. ಆದರೆ ಮಳೆಯಾಗುತ್ತಿರುವ ಹಿನ್ನಲೆ ಓಡಾಟ ತೊಂದರೆ ಎಂಬ ಕಾರಣಕ್ಕೆ ಇಲ್ಲಿಯೇ ಇರುತ್ತೇನೆ ಎಂದು ಅವರು ಪ್ರತಿಕ್ರಿಯಿಸಿದರು.
ಸೋನೆ ಮಳೆಯಿಂದ ತೊಂದರೆ:
ಸಾಮಾನ್ಯವಾಗಿ ಜೂನ್, ಜುಲೈ ತಿಂಗಳಲ್ಲಿ ನೇರಳೆ ಹಣ್ಣಿನ ಸೀಸನ್. ಅದೇ ಅವಧಿಯಲ್ಲಿ ಹಾಸನದಲ್ಲಿ ಮಳೆಯೂ ಇರುತ್ತದೆ. ಜಿಟಿ ಜಿಟಿ ಮಳೆಯಿಂದ ಜನರು ಮನೆಯಿಂದ ಹೊರಬರುವುದು ವಿರಳ. ಮೋಡ ಮುಸುಕಿದ ವಾತಾವರಣವಿದ್ದಾಗ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಮಳೆಯಿದ್ದರೆ ವ್ಯಾಪಾರ ಅಷ್ಟಕ್ಕಷ್ಟೆ ಎನ್ನುತ್ತಾರೆ ವ್ಯಾಪಾರಿಗಳು.
ಕಾಯಿಲೆಗೆ ನೇರಳೆ ಮದ್ದು: ರಕ್ತದೊತ್ತಡ, ಮಧುಮೇಹ ಕಾಯಿಲೆಗಳಿದ್ದವರು ಪ್ರತಿದಿನ ನೇರಳೆ ಹಣ್ಣು ತಿಂದರೆ ಕಾಯಿಲೆ ನಿಯಂತ್ರಿಸಬಹುದು. ಸಿಹಿ, ಒಗರು ರುಚಿ ಹೊಂದಿರುವ ನೇರಳೆಯನ್ನು ಉಪ್ಪಿನ ಜೊತೆ ಸೇವಿಸುವುದು ವಾಡಿಕೆ. ನೇರಳೆ ಹಣ್ಣುಗಳ ತಿರುಳನ್ನು ವೈನ್, ವಿನೆಗರ್, ಜಾಮ್ ತಯಾರಿಕೆಗೂ ಬಳಸಲಾಗುತ್ತದೆ. ಇದರ ಬೀಜಗಳನ್ನು ಆಯುರ್ವೇದ, ಯುನಾನಿ ಔಷಧಿಯಾಗಿಯೂ ಬಳಸಲಾಗುತ್ತದೆ. ಹಣ್ಣಿನ ಬೀಜದಲ್ಲಿ ಪ್ರೋಟಿನ್, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಮ್ ಅಂಶಗಳು ಸಹ ಇರುತ್ತವೆ.
0 Comments