ಹಾಸನ : ದೇಶದಾದ್ಯಂತ ಜುಲೈ 1 ರಿಂದ ನೂತನ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಜಾರಿಯಾಗಿದ್ದು, ಇದರಡಿ ಜಿಲ್ಲೆಯ ಮೊದಲ ಪ್ರಕರಣ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಬೆಂಗಳೂರಿನ ವಿಮಾನ ನಿಲ್ದಾಣದಿಂದ ಬರುತ್ತಿದ್ದ ವೇಳೆ ತಾಲ್ಲೂಕಿನ ಸೀಗೆ ಗೇಟ್ ಬಳಿ ಕಾರು ರಸ್ತೆ ಬದಿಗೆ ಉರುಳಿ ಬಿದ್ದಿದ್ದು, ಇಂದು (60) ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇಂದು ಅವರ ಪತಿ ಯೋಗೀಶ್ ಹಾಗು ಕಾರು ಚಾಲಕ ಸಾಗರ್ ಗಾಯಗೊಂಡಿದ್ದಾರೆ. ಇಂದು ಮತ್ತು ಯೋಗೀಶ್ ದಂಪತಿಯನ್ನು ಜುಲೈ 1ರ ಬೆಳಿಗ್ಗೆ ಕಾರು ಚಾಲಕ ಸಾಗರ್ ಎಂಬಾತ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಳೇಬೀಡಿಗೆ ಕರೆತರುತ್ತಿದ್ದ. ಬೆ. 6.15ರ ಸಮಯದಲ್ಲಿ ಸೀಗೆ ಗೇಟ್ ಸಮೀಪ ಕಾರು ಹಳ್ಳಕ್ಕೆ ಬಿದ್ದಿದೆ. ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 281, 106ರ ಅಡಿ ಸೋಮವಾರ ಬೆಳಿಗ್ಗೆ 9.15ಕ್ಕೆ ಹಾಸನ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಅತಿ ವೇಗ ಹಾಗು ನಿರ್ಲಕ್ಷ್ಯತನದಿಂದ ವಾಹನ ಚಾಲನೆ ಮಾಡಿದ ಕಾರು ಚಾಲಕ ಸಾಗರ್ ಮಹಿಳೆಯ ಸಾವಿಗೆ ಕಾರಣನಾಗಿದ್ದಾನೆ ಎಂದು ದೂರಲಾಗಿದೆ. ಕೇಂದ್ರ ಸರ್ಕಾರ ಐಪಿಸಿ, ಸಿಆರ್‌ಪಿಸಿ, ಎವಿಡೆನ್‌್ಸ ಆ್ಯಕ್ಟ್ ಬದಲು ಭಾರತೀಯ ನ್ಯಾಯ ಸಂಹಿತೆ, ನಾಗರಿಕ ಸುರಕ್ಷಾ ಸಂಹಿತೆ, ಸಾಕ್ಷ್ಯ ಅಧಿನಿಯಮ ಜಾರಿಗೆ ತಂದಿದ್ದು, ಇದರಡಿ ದಾಖಲಾಗಿರುವ ಮೊದಲ ಪ್ರಕರಣ ಇದಾಗಿದೆ.
ಇದು ಹೊಸ ಕಾನೂನಿನಡಿ ದಾಖಲಾದ ರಾಜ್ಯದ ಮೊದಲ ಪ್ರಕರಣ ಎನ್ನಲಾಗುತ್ತಿದೆ. ಆದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತಾ ಅವರು ಸ್ಪಷ್ಟನೆ ನೀಡಿದ್ದು, ಮಧ್ಯರಾತ್ರಿಯಿಂದಲೇ ಬಿಎನ್‌ಎಸ್ ಅಡಿ ಪ್ರಕರಣ ದಾಖಲಾಗಿವೆ. ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ರಾಜ್ಯಕ್ಕೆ ಮೊದಲನೇಯದಲ್ಲ ಎಂದು ಪ್ರತಿಕ್ರಿಯಿಸಿದರು.
0 Comments