ಹಾಸನ: ಲೋಕಸಭಾ ಚುನಾವಣೆ ಗೆಲುವಿನ ಬಳಿಕ ಉತ್ಸಾಹದಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರಿಗೆ ಪಕ್ಷದಲ್ಲಿ ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಇರುಸು ಮುರುಸು ಉಂಟುಮಾಡುತ್ತಿದೆ.
ಸಮುದಾಯಕ್ಕೊಂದು ಡಿಸಿಎಂ ಸ್ಥಾನ ಬೇಕು, ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಸಚಿವ ಸ್ಥಾನ ತ್ಯಜಿಸುತ್ತೇನೆ, ಸ್ವಾಮೀಜಿ ಕಾವಿ ಕೊಟ್ಟರೆ ನಾನೂ ಪೀಠಾಧಿಪತಿಯಾಗುತ್ತೇನೆ ಎಂಬ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರ ಹೇಳಿಕೆಗಳಿಂದ ಕಾಂಗ್ರೆಸ್ ಮುಖಂಡರು ಹಾಗು ಕಾರ್ಯಕರ್ತರು ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ವ್ಯತಿರಿಕ್ತ ಹೇಳಿಕೆಗಳು ಪಕ್ಷ ಸಂಘಟನೆಗೆ ಮುಳ್ಳಾಗುವ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹೆಚ್ಚು ಬೆಂಬಲಿಗರಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ನಡೆಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಬಹಿರಂಗವಾಗಿ ಎಲ್ಲಿಯೂ ಹೇಳಿಕೊಳ್ಳಲಾಗದೆ ತಮ ನೆಚ್ಚಿನ ನಾಯಕನನ್ನು ಬಿಟ್ಟುಕೊಡಲು ಆಗದೇ ಮನಸಲ್ಲೇ ಮರುಕಪಡುವಂತಾಗಿದೆ. ಇದು ಮುಂಬರುವ ಜಿಲ್ಲಾ ಹಾಗು ತಾಲ್ಲೂಕು ಪಂಚಾಯಿತಿ ಚುನಾವಣೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಜಿಲ್ಲೆಯಿಂದ ಅಂತರ:
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರು ಹಾಸನದಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಪ್ರತಿ ಮೂರು ತಿಂಗಳಿಗೊಮೆ ನಡೆಯಬೇಕಿದ್ದ ಕೆಡಿಪಿ ಸಭೆ, ಪ್ರತಿ ತಿಂಗಳಿಗೊಮೆ ನಡೆಯಬೇಕಿದ್ದ ಜನ ಸ್ಪಂದನ ಸಭೆಗಳು ಮಾಯವಾಗಿ ಬಹಳ ದಿನಗಳಾದವು. ಲೋಕಸಭಾ ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಸರ್ಕಾರಿ ಸಭೆಗಳನ್ನು ಮುಂದೂಡಲಾಗಿತ್ತಾದರೂ ಆ ಬಳಿಕವಾದರೂ ಸಚಿವರು ಅದರ ಬಗ್ಗೆ ಯೋಚಿಸಿಲ್ಲ. 25 ವರ್ಷಗಳ ಬಳಿಕ ಜೆಡಿಎಸ್ ಕಪಿಮುಷ್ಟಿಯಿಂದ ಜಿಲ್ಲೆಯನ್ನು ಪಾರು ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಮುಂದಿನ ಚುನಾವಣೆ ಹೇಗೆ ಎದುರಿಸಬೇಕೆಂದು ಹೇಳಿಕೊಡಲು ಯಾರೂ ಇಲ್ಲದಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಇದೆಲ್ಲವನ್ನು ಗಂಭೀರವಾಗಿ ಪರಿಗಣಿಸದೆ ಇರುವುದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇದರ ಜೊತೆಗೆ ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಶ್ರೀ ಚಂದ್ರಶೇಖರ ಸ್ವಾಮೀಜಿ ಕುರಿತು ಲಘುವಾಗಿ ಮಾತನಾಡಿದ್ದು ಸಮುದಾಯದ ನಾಯಕರನ್ನು ಕೆರಳಿಸಿದೆ. ಸಚಿವರು ಕ್ಷಮೆ ಕೇಳದಿದ್ದರೆ ಹೋರಾಟ ನಡೆಸುವ ಎಚ್ಚರಿಕೆ ಸಹ ನೀಡಲಾಗಿದೆ. ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗು ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಒಡನಾಟದಲ್ಲಿರುವ ಮುಖಂಡರು ಸಚಿವ ರಾಜಣ್ಣ ನಡೆಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ನಿಗದಿಯಾಗದ ಮುಹೂರ್ತ:
ಶ್ರೇಯಸ್ ಪಟೇಲ್ ಅವರು ಸಂಸದರಾಗಿ ಆಯ್ಕೆಯಾಗಿರುವ ಹಿನ್ನಲೆ ಜಿಲ್ಲಾ ಮಟ್ಟದಲ್ಲಿ ಬೃಹತ್ ಸಮಾವೇಶ ಆಯೋಜಿಸಲು ಕಾಂಗ್ರೆಸ್‌ನ ಜಿಲ್ಲಾ ನಾಯಕರು ನಿರ್ಧರಿಸಿದ್ದಾರಾದರೂ ಸಚಿವ ರಾಜಣ್ಣ ಅವರು ಸಮಯ ನೀಡುತ್ತಿಲ್ಲ. ಈ ಸಂಬಂಧ ಸಚಿವರನ್ನು ಎರಡೂ ಬಾರಿ ಭೇಟಿಯಾದರೂ ದಿನಾಂಕ ತಿಳಿಸುವುದಾಗಿ ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ.
ಉದ್ದೇಶ ಅರ್ಥವಾಗುತ್ತಿಲ್ಲ:
ಉಪಮುಖ್ಯಮಂತ್ರಿ ಸ್ಥಾನದ ಕುರಿತು ಪದೆ ಪದೇ ಸಚಿವ ಕೆ.ಎನ್.ರಾಜಣ್ಣ ಪ್ರಸ್ತಾಪಿಸುವುದರ ಹಿಂದಿನ ಉದ್ದೇಶ ಅರ್ಥವಾಗುತ್ತಿಲ್ಲ. ಜಿಲ್ಲೆಯಲ್ಲಿ ಡಿ.ಕೆ.ಶಿವಕುಮಾರ್ ಹಾಗು ಕೆ.ಎನ್.ರಾಜಣ್ಣ ಇಬ್ಬರಿಗೂ ಅಭಿಮಾನಿಗಳಿದ್ದಾರೆ. ಇತ್ತೀಚಿನ ಬೆಳವಣಿಗೆಯಿಂದ ಪಕ್ಷದ ಮೇಲೆ ಪರಿಣಾಮ ಬೀರುತ್ತಿದೆ. ಅವರ ಲೆಕ್ಕಾಚಾರ, ಉದ್ದೇಶ ಏನಿದೆ ಎಂಬುದು ತಿಳಿಯುತ್ತಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್ ಅವರು ಪ್ರತಿಕ್ರಿಯಿಸಿದರು.
ಮುಂಬರುವ ಚುನಾವಣೆ ಗೆಲ್ಲುವುದಷ್ಟೇ ನಮ ಉದ್ದೇಶ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಹ ಇದೇ ವಿಚಾರದಲ್ಲಿ ಸೂಚನೆ ನೀಡಿದ್ದಾರೆ. ಪಕ್ಷ ಸಂಘಟನೆಗಾಗಿ ಜಿಲ್ಲಾಧ್ಯಕ್ಷ ಹಾಗು ಪದಾಧಿಕಾರಿಗಳಿಗೆ ಜವಾಬ್ದಾರಿ ವಹಿಸಿದ್ದಾರೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು.
0 Comments