ಪುಡಿ ರೌಡಿಯ ಕಾಲಿಗೆ ಪೊಲೀಸರ ಗುಂಡೇಟು
ಹಾಸನ: ಖಾಸಗಿ ಬಸ್ ಅಡ್ಡಗಟ್ಟಿ ಮಚ್ಚಿನಿಂದ ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿ ಮುಂಭಾಗದ ಗಾಜು ಪುಡಿ ಪುಡಿ ಮಾಡಿದ್ದ ಪುಡಿ ರೌಡಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಒಂದು ಕೊಲೆ, ಮೂರು ಕೊಲೆ ಯತ್ನ ಕೇಸ್ ನ ಆರೋಪಿ ಮನು (23) ಜ. 28ರ ರಾತ್ರಿ ನಗರ ಹೊರವಲಯದ ದೇವರಾಯಪಟ್ಟಣ ಬಳಿ ಪುಂಡಾಟ ಮೆರೆದಿದ್ದ.
ಉಡುಪಿ ಜಿಲ್ಲೆ ಥರಸಿ ಗ್ರಾಮದ ಬಸ್ ಚಾಲಕ ಅರುಣ್ ಕುಮಾರ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದ.
ಪ್ರಕರಣ ದಾಖಲಿಸಿಕೊಂಡಿದ್ದ ನಗರ ಠಾಣೆ ಪೊಲೀಸರು ಶಾಂತಿಗ್ರಾಮದಿಂದ ಗುರುವಾರ ಸಂಜೆ ಪೊಲೀಸ್ ಜೀಪ್ ನಲ್ಲಿ ಕರೆತರುತ್ತಿದ್ದಾಗ ಮಾರ್ಗಮಧ್ಯೆ ಮೂತ್ರ ವಿಸರ್ಜನೆಗೆ ಹೋಗುವುದಕ್ಕಾಗಿ ಕೆಳಗೆ ಇಳಿದಿದ್ದ. ನಂತರ ಪೊಲೀಸರ ಮೇಲೆ ಹಲ್ಲೆ ನಡೆಸಿ ಓಡಿ ಹೋಗಲು ಯತ್ನಿಸಿದ್ದ. ಹೀಗಾಗಿ ಪೊಲೀಸರು ಕಾಲಿಗೆ ಗುಂಡು ಹಾರಿಸಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಾಲಕ ಅರುಣ್ ಪ್ರಯಾಣಿಕರನ್ನು ಕೂರಿಸಿಕೊಂಡು ಬೆಂಗಳೂರಿನಿಂದ ಕುಂದಾಪುರಕ್ಕೆ ವಾಪಾಸ್ಸಾಗುತ್ತಿದ್ದಾಗ ತಣ್ಣೀರುಹಳ್ಳದಿಂದ ಹಿಂದಿನಿಂದ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಮನು ಓವರ್ ಟೇಕ್ ಮಾಡಿ ದೇವರಾಯಪಟ್ಟಣ ಬಳಿ ಅಡ್ಡಲಾಗಿ ನಿಲ್ಲಿಸಿದ್ದ. ಏಕಾಏಕಿ ಮಚ್ಚಿನೊಂದಿಗೆ ಕಾರಿನಿಂದ ಇಳಿದು ಚಾಲಕನ ಬಳಿಗೆ ಬಂದು ಬೀಸಿದ್ದಾನೆ. ಅವರು ತಪ್ಪಿಸಿಕೊಂಡಿದ್ದರಿಂದ ಮುಂಭಾಗದ ಗಾಜನ್ನು ಮಚ್ಚಿನಿಂದ ಬೀಸಿ ಒಡೆದು ಹಾಕಿದ್ದ. ಈ ದೃಶ್ಯವನ್ನು ಬಸ್ ನಿರ್ವಾಹಕ ವಿಡಿಯೋ ಮಾಡಿಕೊಳ್ಳುತ್ತಿದ್ದುದನ್ನು ಕಂಡು ವಾಪಾಸ್ ಕಾರು ಹತ್ತಿ ತೆರಳಿದ್ದ. ಈಗ ಆಸ್ಪತ್ರೆ ಸೇರಿದ್ದಾನೆ.

0 Comments