ಡಿಜಿಟಲ್ ಕ್ರಾಂತಿ ಪತ್ರಕರ್ತರಿಗೆ ಸವಾಲು: ರವಿ ಹೆಗಡೆ


ಹಾಸನ: ಇಂದಿನ ಡಿಜಿಟಲ್ ಕ್ರಾಂತಿ ಪತ್ರಿಕೋದ್ಯಮಕ್ಕೆ ಸವಾಲೊಡ್ಡಿದ್ದು, ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವವರು ಮಾತ್ರ ಬದುಕುಳಿಯುತ್ತಾರೆ ಎಂದು ಕನ್ನಡಪ್ರಭ ಮತ್ತು ಸುವರ್ಣ ಟಿವಿ ವಾಹಿನಿಯ ಮುಖ್ಯಸ್ಥ ರವಿ ಹೆಗಡೆ ಅಭಿಪ್ರಾಯಪಟ್ಟರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಆಯೋಜಿಸಿದ್ದ ಮಾಧ್ಯಮ ದಿನಾಚರಣೆ - 2025 ಕಾರ್ಯಕ್ರಮದಲ್ಲಿ ಅವರು ಈ ಕುರಿತು ಮಾತನಾಡಿದರು.
ಡಿಜಿಟಲ್ ಮಾಧ್ಯಮದ ಬೆಳವಣಿಗೆಯ ಬಗ್ಗೆ ಮಾತನಾಡಿದ ಅವರು, ಕಲ್ಲಚ್ಚಿನಿಂದ ಫ್ಲ್ಯಾಷ್ ನ್ಯೂಸ್ ವರೆಗೆ ಮಾಧ್ಯಮ ಕ್ಷೇತ್ರವು ಅಭಿವೃದ್ಧಿ ಹೊಂದಿದ್ದು, ಇದೀಗ ಒಂದು ರೀತಿಯ "ಡಿಜಿಟಲ್ ಸುನಾಮಿ" ಉಂಟಾಗಿದೆ. ಮುದ್ರಣ ಮಾಧ್ಯಮವು ಹೆಚ್ಚು ಕಾಲ ಉಳಿಯುವುದು ಕಷ್ಟ, 2043ರ ವೇಳೆಗೆ ಅದು ಸಂಪೂರ್ಣ ನಿಂತುಹೋಗಬಹುದು ಎಂಬ ಆತಂಕ ವ್ಯಕ್ತಪಡಿಸಿದ ಅವರು, ದೃಶ್ಯ ಮಾಧ್ಯಮವೂ ಕೂಡ ದೀರ್ಘಕಾಲ ಮುಂದುವರಿಯುವುದಿಲ್ಲ ಎಂದು ಭವಿಷ್ಯ ನುಡಿದರು.
ಕೋವಿಡ್ ನಂತರ, 24/7 ಸುದ್ದಿ ವಾಹಿನಿಗಳ ಟಿಆರ್‌ಪಿ ಕಡಿಮೆಯಾಗುತ್ತಿದೆ. ಆದರೆ, ಸುದ್ದಿಗಳನ್ನು ಓದುವವರು ಮತ್ತು ಬಳಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮುದ್ರಣ ಮಾಧ್ಯಮ ಓದುಗರು ಡಿಜಿಟಲ್ ವೇದಿಕೆಗಳತ್ತ, ಟಿವಿ ವೀಕ್ಷಕರು ಯೂಟ್ಯೂಬ್ ಕಡೆಗೆ ಬದಲಾಗುತ್ತಿದ್ದಾರೆ ಎಂಬ ಗಂಭೀರ ವಿಷಯವನ್ನು ಅವರು ತಿಳಿಸಿದರು. ಇದೇ ರೀತಿಯ ಬದಲಾವಣೆ ಸಿನಿಮಾ ಕ್ಷೇತ್ರದಲ್ಲೂ ಆಗಿದ್ದು, OTT ಪ್ಲಾಟ್‌ಫಾರ್ಮ್‌ಗಳು ಅದನ್ನು ಆವರಿಸಿಕೊಂಡಿವೆ ಎಂದರು.
ಹೀಗಾಗಿ, "ಪತ್ರಿಕೋದ್ಯಮ ಇನ್ನು ಪತ್ರಿಕೋದ್ಯಮವಲ್ಲ, ಅದು ಮೀಡಿಯಾ ಟೆಕ್ ಉದ್ಯಮವಾಗಿದೆ" ಎಂದು ರವಿ ಹೆಗಡೆ ಹೇಳಿದರು. ಸಾಂಪ್ರದಾಯಿಕ ಮಾಧ್ಯಮವನ್ನು ಈ ಡಿಜಿಟಲ್ ಯುಗದಲ್ಲಿ ಹೇಗೆ ಉಳಿಸಿಕೊಳ್ಳುವುದು ಎಂಬುದೇ ಪ್ರಸ್ತುತದ ಮುಖ್ಯ ಪ್ರಶ್ನೆ. ಯಾರು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಾರೋ ಅವರು ಮಾತ್ರ ಬದುಕುಳಿಯುತ್ತಾರೆ ಎಂಬ ಸ್ಪಷ್ಟ ಸಂದೇಶವನ್ನು ನೀಡಿದರು.
ಡಿಜಿಟಲ್ ಕ್ರಾಂತಿಯನ್ನು "ಎರಡು ಅಲುಗಿನ ಕತ್ತಿಯ ಪರಿಸ್ಥಿತಿ" ಎಂದು ಬಣ್ಣಿಸಿದ ಅವರು, ಡಿಜಿಟಲ್ ಮಾಧ್ಯಮದಲ್ಲಿ ಎಲ್ಲರಿಗೂ ಅವಕಾಶವಿದೆ, ಆದರೆ ಇಲ್ಲಿ ಸಂಯಮದ ಕೊರತೆ ಇದೆ ಎಂದು ಎಚ್ಚರಿಸಿದರು. ಸೌಜನ್ಯ ಪ್ರಕರಣವು ಪದೇ ಪದೇ ಮುನ್ನೆಲೆಗೆ ಬರುತ್ತಿರುವುದು ಡಿಜಿಟಲ್ ಮಾಧ್ಯಮಗಳಿಂದಲೇ. ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಸಂಯಮ, ವಿವೇಚನೆ ಇದೆ ಆದರೆ ಡಿಜಿಟಲ್ ವೇದಿಕೆಗಳಲ್ಲಿ 'ಫಾರ್ವರ್ಡ್' ಬಟನ್ ಮಾತ್ರ ಇರುತ್ತದೆ ಎಂದು ಅವರು ತಿಳಿಸಿದರು.
ಇಂದಿನ ದಿನಗಳಲ್ಲಿ ಡಿಜಿಟಲ್ ಮತ್ತು ಮುಖ್ಯವಾಹಿನಿ ಮಾಧ್ಯಮಗಳ ನಡುವೆ ಒಂದು ರೀತಿಯ ಯುದ್ಧವೇ ನಡೆಯುತ್ತಿದೆ. ಆದರೆ ಇದು ಅನಗತ್ಯ, ಎಲ್ಲರೂ ಸಮಾಜದ ಒಳಿತಿಗಾಗಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಆಶಿಸಿದರು. ಕೃತಕ ಬುದ್ಧಿಮತ್ತೆ (AI) ಕೂಡ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಅಪಾಯವನ್ನು ಹೆಚ್ಚಿಸುತ್ತಿರುವುದು ಸತ್ಯ. ಮಾಧ್ಯಮಕ್ಕೆ ವಿಶ್ವಾಸಾರ್ಹತೆ (credibility) ಮುಖ್ಯವಾಗಿದ್ದು, ಎಲ್ಲಾ ಮಾಧ್ಯಮಗಳು ಇದನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಜಿಲ್ಲಾಧ್ಯಕ್ಷ ವೇಣುಕುಮಾರ್ ಪತ್ರಕರ್ತರನ್ನು ಒಂದುಗೂಡಿಸಲು ಉತ್ತಮ ಪ್ರಯತ್ನ ಮಾಡಿದ್ದಾರೆ ಎಂದು ಶ್ಲಾಘಿಸಿದರು. "ನುಡಿದಂತೆ ನಡೆಯುವ" ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಪತ್ರಿಕಾ ಭವನಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಪತ್ರಕರ್ತರಿಗೆ ನಿವೇಶನ ಒದಗಿಸಲು ಜಿಲ್ಲಾಧಿಕಾರಿಗಳು ಸಹಕರಿಸಬೇಕೆಂದು ಅವರು ಆಶಿಸಿದರು.
93 ವರ್ಷಗಳ ಇತಿಹಾಸವಿರುವ ಸಂಘದಲ್ಲಿ 10,000 ಸದಸ್ಯರಿದ್ದು, ಅದರ ಬೆಳವಣಿಗೆಯಲ್ಲಿ ಹಾಸನ ಜಿಲ್ಲೆಯ ಪಾತ್ರ ದೊಡ್ಡದಿದೆ ಎಂದರು . ಸಾತ್ವಿಕ ಮನಸ್ಸಿನ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿರುವ ಬಾಳು ಗೋಪಾಲ್ ಅವರನ್ನು ಹೊಗಳಿದರು.
ಮುಖ್ಯಮಂತ್ರಿಗಳ ಆರೋಗ್ಯ ಸಂಜೀವಿನಿ ಹಾಗೂ ಗ್ರಾಮೀಣ ಪತ್ರಕರ್ತರ ಯೋಜನೆಗಳನ್ನು ಜಾರಿಗೆ ತಂದ ಸಿದ್ದರಾಮಯ್ಯ ಸರ್ಕಾರಕ್ಕೆ ಸಂಘವು ಕೃತಜ್ಞತೆ ಸಲ್ಲಿಸಿತು. ಅಲ್ಲದೆ, ಈ ಯೋಜನೆಗಳನ್ನು ಮಾನ್ಯತೆ ಇಲ್ಲದ ಸದಸ್ಯರಿಗೂ ವಿಸ್ತರಿಸುವಂತೆ ಶಾಸಕ ಶಿವಲಿಂಗೇಗೌಡರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಮದನ್ ಗೌಡ ಮಾತನಾಡಿ, ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಪತ್ರಕರ್ತರ ಬಗ್ಗೆ ತೋರಿಸಿರುವ ಪ್ರೀತಿ ಮತ್ತು ಕಾಳಜಿಯನ್ನು ಶ್ಲಾಘಿಸಿದರು

Post a Comment

0 Comments