ಹಾಸನ: ಇತ್ತೀಚಿನ ದಿನಗಳಲ್ಲಿ ಸುದ್ದಿಗಳ ಬದಲಾಗಿ ಅಭಿಪ್ರಾಯಗಳನ್ನು ಹೇರುವ ಪ್ರವೃತ್ತಿ ಹೆಚ್ಚಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ವಿಷಾದ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಆಯೋಜಿಸಿದ್ದ ಮಾಧ್ಯಮ ದಿನಾಚರಣೆ - 2025 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊಬೈಲ್ ಹೊಂದಿರುವವರೆಲ್ಲರೂ ಪತ್ರಕರ್ತರಾಗಿದ್ದು, ಸುದ್ದಿ ನಿಜವೋ ಸುಳ್ಳೋ ಅಥವಾ ಅದರ ಹಿಂದಿನ ಉದ್ದೇಶ ಏನಿದೆ ಎಂಬುದನ್ನು ಪರಿಶೀಲಿಸುವ ಸಂಯಮ ತೋರುತ್ತಿಲ್ಲ. ಇದು ಉತ್ತಮ ಪತ್ರಿಕೋದ್ಯಮಕ್ಕೆ ದೊಡ್ಡ ಬೆದರಿಕೆಯಾಗಿದ್ದು, ಆತಂಕಕಾರಿ ಬೆಳವಣಿಗೆ ಎಂದು ಎಚ್ಚರಿಸಿದರು.
ಮಾಧ್ಯಮವು ಸಮಾಜವನ್ನು ರೂಪಿಸುವ ಶಕ್ತಿಯನ್ನು ಹೊಂದಿದೆ. ಸ್ವಾತಂತ್ರ್ಯ ಹೋರಾಟವೇ ಇದಕ್ಕೆ ಉತ್ತಮ ಉದಾಹರಣೆ. ಸಮಾಜದಲ್ಲಿ ಪತ್ರಕರ್ತರ ಮೇಲೆ ಹೆಚ್ಚಿನ ನಂಬಿಕೆ ಇದೆ, ಆದರೆ ಅವರ ಸುರಕ್ಷತೆಯನ್ನು ಒದಗಿಸುವಲ್ಲಿ ಸಮಾಜ ವಿಫಲವಾಗಿದೆ. ಆದ್ದರಿಂದ, ಪತ್ರಕರ್ತರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಅತ್ಯಂತ ಮುಖ್ಯ ಎಂದು ಪ್ರತಿಪಾದಿಸಿದರು.
ನಿಖರವಾದ ಸುದ್ದಿಗೆ ಹೇಗೆ ಬೇಡಿಕೆಯಿದೆಯೋ, ಅದೇ ರೀತಿ ನಿಖರವಾದ ಪತ್ರಕರ್ತರ ಅವಶ್ಯಕತೆ ಜಗತ್ತಿಗಿದೆ, ಅದು ಯಾವುದೇ ಮಾಧ್ಯಮವಾಗಲಿ ಎಂದರು.
ಶಾಸಕ ಶಿವಲಿಂಗೇಗೌಡರ ಕಾರ್ಯವೈಖರಿಯನ್ನು ಶ್ಲಾಘಿಸಿದ ಲತಾಕುಮಾರಿ ಅವರು, "ನಗರೀಕರಣದ ಮಿಶ್ರಣವಿಲ್ಲದೆ ಗ್ರಾಮೀಣ ಸೊಗಡಿನಲ್ಲಿ ಮಾತು ಮತ್ತು ವಿಶ್ಲೇಷಣೆ ಮಾಡುವ ಅವರ ಕಾರ್ಯ ನಿಜಕ್ಕೂ ವಿಶೇಷ" ಎಂದರು. "ನೋಡಿದ್ದನ್ನು ಪ್ರಮಾಣೀಕರಿಸುವ ಸಂಪ್ರದಾಯವನ್ನು ಪತ್ರಕರ್ತರು ಹೆಚ್ಚು ಅಳವಡಿಸಿಕೊಳ್ಳಬೇಕು ಮತ್ತು ಪ್ರಜ್ಞಾವಂತರಾಗಿ ಕಾರ್ಯನಿರ್ವಹಿಸಬೇಕು" ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ, ಪತ್ರಕರ್ತರಿಗಾಗಿ ನಿವೇಶನ ಒದಗಿಸಲು ಸಹಕರಿಸುವುದಾಗಿ ಭರವಸೆ ನೀಡಿದ ಅವರು, ಕಾರ್ಯಕ್ರಮಕ್ಕಾಗಿ ತಮ್ಮ ಸಮಯವನ್ನು ಮೀಸಲಿಟ್ಟಿರುವುದಾಗಿ ತಿಳಿಸಿ, ಪತ್ರಕರ್ತರಿಗೆ ತಮ್ಮ ಸಂಪೂರ್ಣ ಸಹಕಾರ ಇರುತ್ತದೆ ಎಂದು ಭರವಸೆ ನೀಡಿದರು.
0 Comments